ಪ್ರಿಯಾಂಕಾ ಗಾಂಧಿ, ಕೇಜ್ರಿವಾಲ್ ಗೆ ಚುನಾವಣಾ ಆಯೋಗದಿಂದ ನೋಟಿಸ್
ಮೋದಿಯ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪ
ಪ್ರಿಯಾಂಕಾ ಗಾಂಧಿ, ಕೇಜ್ರಿವಾಲ್ | Photo: NDTV
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಚುನಾವಣಾ ಆಯೋಗವು ಮಂಗಳವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಗೆ ನೋಟಿಸುಗಳನ್ನು ಜಾರಿಗೊಳಿಸಿದೆ.
ಮಧ್ಯಪ್ರದೇಶದ ಸಾನ್ವೆರ್ ಪಟ್ಟಣದಲ್ಲಿ ನ .10ರಂದು ಪ್ರಿಯಾಂಕಾ ಮಾಡಿರುವ ಭಾಷಣದ ವಿರುದ್ಧ ಬಿಜೆಪಿ ದೂರು ಸಲ್ಲಿಸಿದ ಬಳಿಕ ಆಯೋಗ ನೋಟಿಸ್ ಜಾರಿಗೊಳಿಸಿದೆ. ಪ್ರಿಯಾಂಕಾ ತನ್ನ ಭಾಷಣದ ವೇಳೆ ಸಾರ್ವಜನಿಕ ಕ್ಷೇತ್ರದ ಉದ್ಯಮ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಬಗ್ಗೆ ಪ್ರಸ್ತಾಪಿಸಿ, ‘‘ಮೋದೀಜಿ, ಮೊದಲು ಬಿಎಚ್ಇಎಲ್ ನಮಗೆ ಕೆಲಸ ಕೊಡುತ್ತಿತ್ತು ಮತ್ತು ದೇಶವನ್ನು ಮುಂದಕ್ಕೆ ಒಯ್ಯುತ್ತಿತ್ತು. ನೀವು ಅದನ್ನು ನಿಮ್ಮ ದೊಡ್ಡ ಕೈಗಾರಿಕೋದ್ಯಮಿ ಗೆಳೆಯರಿಗೆ ಯಾಕೆ ಕೊಟ್ಟಿದ್ದೀರಿ?’’ ಎಂದು ಪ್ರಶ್ನಿಸಿದ್ದರು.
ಬಿಎಚ್ಇಎಲ್ ಖಾಸಗೀಕರಿಸುವ ಉದ್ದೇಶವಿಲ್ಲ ಎಂದು ನ.1 ರಂದು ಕೇಂದ್ರ ಸರಕಾರ ಹೇಳಿತ್ತು.
ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪುದಾರಿಗೆಳೆಯುವ ಮೂಲಕ ಪ್ರಿಯಾಂಕಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಅರೋಪಿಸಿತ್ತು. ಗುರುವಾರ ರಾತ್ರಿ 8 ಗಂಟೆಯ ಮೊದಲು ನೋಟಿಸಿಗೆ ಉತ್ತರಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ.
ಕೇಜ್ರಿವಾಲ್ ಗೆ ನೀಡಿದ ನೋಟಿಸಿನಲ್ಲಿ, ಸಾಮಾಜಿಕ ಮಾಧ್ಯಮ xನಲ್ಲಿ ಅವರು ಹಾಕಿರುವ ಎರಡು ವಿಡಂಬನಾತ್ಮಕ ಸಂದೇಶಗಳನ್ನು ಗಣನೆಗೆ ತೆಗೆದುಕೊಂಡಿದೆ.
ಮೊದಲ ಸಂದೇಶದಲ್ಲಿ, ‘ಮೋದಿಯ ಆಕರ್ಷಕ ದೈನಂದಿನ ಕಾರ್ಯಕ್ರಮ’ ಎಂಬ ತಲೆಬರಹದೊಂದಿಗೆ ವೀಡಿಯೊವೊಂದನ್ನು ಹಾಕಲಾಗಿದೆ. ಆ ವೀಡಿಯೊದಲಿ ಒಂದು ವ್ಯಂಗ್ಯಚಿತ್ರವಿದೆ. ‘‘ಕೈಗಾರಿಕೋದ್ಯಮಿ ಗೌತಮ್ ಅದಾನಿ ನನ್ನ ‘‘ಧಣಿ’’, ನಾನು ಅವರಿಂದ ಸೂಚನೆಗಳನ್ನು ಪಡೆದುಕೊಳ್ಳುತ್ತೇನೆ’’ ಎಂಬುದಾಗಿ ಆ ವ್ಯಂಗ್ಯಚಿತ್ರದಲ್ಲಿ ಮೋದಿ ಹೇಳುವುದು ಕಾಣುತ್ತದೆ.
ಎರಡನೆಯ ಸಂದೇಶವನ್ನು ನವೆಂಬರ್ 9ರಂದು x ನಲ್ಲಿ ಹಾಕಲಾಗಿದೆ. ಅದರಲ್ಲಿ, ಹಿನ್ನೆಲೆಯಲ್ಲಿ ಅದಾನಿಯ ದೊಡ್ಡ ಚಿತ್ರವಿದ್ದು ಮುನ್ನೆಲೆಯಲ್ಲಿ ಮೋದಿಯ ಚಿತ್ರವಿದೆ. ಕೆಳಗೆ ಹೀಗೆ ಬರೆಯಲಾಗಿದೆ: ‘‘ನರೇಂದ್ರ ಮೋದಿಯಾಗಿರುವ ನಾನು ಜನರಿಗಾಗಿ ಕೆಲಸ ಮಾಡುತ್ತಿಲ್ಲ, ನನ್ನ ಧಣಿಗಾಗಿ ಕೆಲಸ ಮಾಡುತ್ತಿದ್ದೇನೆ’’.
ಚುನಾವಣಾ ಉದ್ದೇಶಕ್ಕಾಗಿ ಆಮ್ ಆದ್ಮಿ ಪಾರ್ಟಿಯು ಮತದಾರರನ್ನು ತಪ್ಪುದಾರಿಗೆಳೆಯಲು ಬಯಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.