ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಾಗ್ದಂಡನೆಗೆ ಆಗ್ರಹಿಸಿ ರಾಜ್ಯಸಭೆಯ ವಿಪಕ್ಷ ಸಂಸದರಿಂದ ನೋಟಿಸ್
ಮುಸ್ಲಿಂ ವಿರೋಧಿ ಭಾಷಣ ಪ್ರಕರಣ
ಶೇಖರ್ ಕುಮಾರ್ ಯಾದವ್ | PC : PTI
ಹೊಸದಿಲ್ಲಿ : ವಿಶ್ವಹಿಂದೂ ಪರಿಷತ್ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದರೆನ್ನಲಾದ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಮಂಡಿಸುವಂತೆ ಕೋರಿ 55 ಮಂದಿ ಪ್ರತಿಪಕ್ಷ ಸಂಸದರು ಶುಕ್ರವಾರ ರಾಜ್ಯಸಭೆಯಲ್ಲಿ ನೋಟಿಸ್ ನೀಡಿದ್ದಾರೆ.
ನ್ಯಾ. ಶೇಖರ್ ಕುಮಾರ್ ಯಾದವ್ ಅವರು ಅಲ್ಪಸಂಖ್ಯಾತರನ್ನು ಗುರಿಯಿರಿಸಿದ್ದಾರೆ ಹಾಗೂ ಅವರ ವಿರುದ್ಧ ಪಕ್ಷಪಾತದ ಹಾಗೂ ಪೂರ್ವಾಗ್ರಹ ಪೀಡಿತ ಭಾವನೆಯನ್ನು ಪ್ರದರ್ಶಿಸಿದ್ದಾರೆ’’ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ಸಲ್ಲಿಸಿರುವ ನೋಟಿಸ್ನಲ್ಲಿ ಆರೋಪಿಸಲಾಗಿದೆಯೆಂದು ಎನ್ಡಿಟಿವಿ ವರದಿ ಮಾಡಿದೆ.
‘‘ದ್ವೇಷ ಭಾಷಣ ಹಾಗೂ ಕೋಮು ಸೌಹಾರ್ದತೆಯನ್ನು ಕದಡಲು ಪ್ರಚೋದನೆ ನೀಡಿದ್ದಕ್ಕಾಗಿ ನ್ಯಾ. ಶೇಖರ್ ಕುಮಾರ್ ಯಾದವ್ ವಿರುದ್ಧ ವಾಗ್ದಂಡನೆ ನಿರ್ಣಯ ಅಂಗೀಕರಿಸಬೇಕು” ಎಂದು ನೋಟಿಸ್ನಲ್ಲಿ ಕೋರಲಾಗಿದೆ.
ಕಾಂಗ್ರೆಸ್ ಸಂಸದರಾದ ಚಿದಂಬರಂ ಹಾಗೂ ದಿಗ್ವಿಜಯ್ ಸಿಂಗ್, ಆಪ್ ಸಂಸದ ರಾಘವ್ ಚಡ್ಡಾ, ಟಿಎಂಸಿ ಸಂಸದರಾದ ಸಾಗರಿಕಾ ಘೋಷ್ ಹಾಗೂ ಸಾಕೇತ್ ಗೋಖಲೆ, ಆರ್ಜೆಡಿ ಸಂಸದ ಮನೋಜ್ ಝಾ ಹಾಗೂ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ನಿರ್ಣಯಕ್ಕೆ ಸಹಿಹಾಕಿದ್ದಾರೆ.
ಸಾರ್ವಜನಿಕ ವೇದಿಕೆಯಲ್ಲಿ ರಾಜಕೀಯ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ನ್ಯಾ.ಯಾದವ್ ಅವರು ತನ್ನ ಮಿತಿಯನ್ನು ದಾಟಿದ್ದಾರೆಂದು ಎಂದು ಪ್ರತಿಪಕ್ಷ ಸಂಸದರು ಆರೋಪಿಸಿದ್ದಾರೆ.
ತೀವ್ರವಾದಿ ಗುಂಪುಗಳು ಅಥವಾ ಪಕ್ಷಗಳ ಜೊತೆ ಹೈಕೋರ್ಟ್ಗಳ ಹಾಲಿ ನ್ಯಾಯಾಧೀಶರು ಗುರುತಿಸಿಕೊಳ್ಳುವಂತಿಲ್ಲ ಎಂದು ವಾಗ್ದಂಡನೆ ನಿರ್ಣಯದಲ್ಲಿ ತಿಳಿಸಲಾಗಿದೆ. ನ್ಯಾಯಾಲಯದ ಸದಸ್ಯರೊಬ್ಬರು ಅಲ್ಪಸಂಖ್ಯಾತರ ವಿರುದ್ಧ ಇಂತಹ ಪಕ್ಷಪಾತದಿಂದ ಕೂಡಿದ, ಪೂರ್ವಾಗ್ರಹ ಪೀಡಿತ ಅಭಿಪ್ರಾಯವನ್ನು ಮತ್ತು ಬಹುಸಂಖ್ಯಾತವಾದಿ ನಿಲುವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದಾದರೆ, ಯಾವುದೇ ಅರ್ಜಿದಾರನು ನ್ಯಾಯಾಲಯದಲ್ಲಿ ನ್ಯಾಯವನ್ನು ಪಡೆಯುವ ಭರವಸೆಯನ್ನು ಹೊಂದಲಾರ ಎಂದು ನಿರ್ಣಯವು ಕಳವಳ ವ್ಯಕ್ತಪಡಿಸಿದೆ.
ನ್ಯಾಯಾಂಗ ಜೀವನದ ಮೌಲ್ಯಗಳ ಕುರಿತ ನೀತಿ ಸಂಹಿತೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಹೇಳಿಕೆಯನ್ನು ಕೂಡಾ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ನೀತಿ ಸಂಹಿತೆಯ ಪ್ರಕಾರ ನ್ಯಾಯಾಧೀಶನು, ರಾಜಕೀಯ ವಿಷಯಗಳು ಅಥವಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ ಅಥವಾ ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವಂತಿಲ್ಲ ಎಂದು ಹೇಳಿರುವುದನ್ನು ಕೂಡಾ ನಿರ್ಣಯದಲ್ಲಿ ಪ್ರಸ್ತಾವಿಸಲಾಗಿದೆ.
ಸಂವಿಧಾನದ 124(5) ಹಾಗೂ ನ್ಯಾಯಾಧೀಶರ (ತನಿಖಾ ಕಾಯ್ದೆ)ಯ ಸೆಕ್ಷನ್ನಡಿ ಯಾದವ್ ವಿರುದ್ದ ವಾಗ್ದಂಡನೆ ಕಲಾಪಗಳನ್ನು ಉಪಕ್ರಮಿಸಬೇಕೆಂದು ನೋಟಿಸ್ನಲ್ಲಿ ಕೋರಲಾಗಿದೆ.
ರವಿವಾರ ಅಲಹಾಬಾದ್ನಲ್ಲಿ ನಡೆದ ವಿಶ್ವಹಿಂದೂ ಪರಿಷತ್ ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನ್ಯಾ.ಯಾದವ್ ಅವರು ಭಾರತವು ಹಿಂದೂ ಬಹುಸಂಖ್ಯಾತರ ಆಶಯದಂತೆ ನಡೆಯುತ್ತಿದೆ ಎಂದು ಹೇಳಿದ್ದರು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಕಾರಿಯಾದ ಮಾತುಗಳನ್ನು ಆಡಿದ್ದರು.
ಯಾದವ್ ಅವರ ವಿವಾದಾತ್ಮಕ ಭಾಷಣಗಳ ವೀಡಿಯೊ ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ನ್ಯಾಯಾಧೀಶರ ಭಾಷಣದ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದವು.