“ಬೊಬ್ಬೆ ಹೊಡೆಯಬಾರದು, ಘೋಷಣೆ ಕೂಗಬಾರದು”: ರಾಜ್ಯಸಭಾ ಸಂಸದರಿಗೆ ನಿಯಮಗಳ ಜ್ಞಾಪಕ ಪತ್ರ ಕಳುಹಿಸಿದ ಸಭಾಪತಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಡಿ. 4ರಂದು ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನಕ್ಕಿಂತ ಮುನ್ನ ರಾಜ್ಯಸಭಾ ಸಂಸದರಿಗೆ ಸದನದ ಹಲವಾರು ನಿಯಮಗಳು ಹಾಗೂ ಪದ್ಧತಿಗಳ ಕುರಿತು ಜ್ಞಾಪನೆಯನ್ನು ಕಳುಹಿಸಲಾಗಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರುದಿನ ಆರಂಭಗೊಳ್ಳಲಿರುವ ಅಧಿವೇಶನವು ಸಾಕಷ್ಟು ಕುತೂಹಲಕಾರಿಯಾಗುವ ನಿರೀಕ್ಷೆಯಿದೆ. ಪ್ರಶ್ನೆಗಾಗಿ ನಗದು ಪಡೆದಿರುವ ಆರೋಪ ಎದುರಿಸುತ್ತಿರುವ ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದಿಂದ ಅಮಾನತುಗೊಳಿಸಲಾಗುವುದೇ ಎಂಬ ಪ್ರಶ್ನೆಯೂ ಇದೆ.
ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಕರ್ ಅವರಿಂದ ಬಂದಿರುವ ಅಧಿಸೂಚನೆಯಲ್ಲಿ ಕೆಲವೊಂದು ಸಾಮಾನ್ಯ ಜ್ಞಾಪನೆಗಳೂ ಇವೆ. ಸಂಸದರು ಸದನದಲ್ಲಿ ವಾದವಿವಾದ ನಡೆಸಬಾರದು, ಬೊಬ್ಬೆ ಹೊಡೆಯಬಾರದು ಮತ್ತು ಘೋಷಣೆ ಕೂಗಬಾರದು ಎಂದೂ ಅವರು ಹೇಳಿದ್ದಾರೆ.
ಸದನದಲ್ಲಿ ಎತ್ತಲು ಉದ್ದೇಶಿಸಲಾಗಿರುವ ಯಾವುದೇ ವಿಚಾರವನ್ನು ಸಭಾಪತಿಗಳು ಒಪ್ಪಿ ನೋಟಿಸ್ ಅನ್ನು ಸದಸ್ಯರಿಗೆ ನೀಡುವ ತನಕ ಅದರ ಕುರಿತು ಯಾವುದೇ ಪ್ರಚಾರ ಮಾಡಬಾರದು ಎಂದೂ ಸೂಚಿಸಲಾಗಿದೆ.
ಹಲವು ಸಂಸದರು ತಾವು ಮೇಲ್ಮನೆಯಲ್ಲಿ ಎತ್ತುವ ಪ್ರಮುಖ ವಿಚಾರಗಳ ಕುರಿತಂತೆ ಮುಂಚಿತವಾಗಿಯೇ ಬಹಿರಂಗಪಡಿಸುವುದರಿಂದ ಈ ಜ್ಞಾಪನೆ ಕಳುಹಿಸಲಾಗಿದೆ. ಇಂತಹುದೇ ನಿಯಮದ ಕುರಿತು ಲೋಕಸಭೆ ಕೂಡ ತನ್ನ ಸದಸ್ಯರಿಗೆ ಕಳುಹಿಸಿದೆ. ಸಂಸದರ ಪ್ರಶ್ನೆಗಳನ್ನು ಸದನದಲ್ಲಿ ಕೇಳಿ ಅದಕ್ಕೆ ಉತ್ತರ ಪಡೆಯುವ ತನಕ ಅದು ಗೌಪ್ಯವಾಗಿರಬೇಕು ಎಂದೂ ತಿಳಿಸಲಾಗಿದೆ.
ಸಂಸದರಿಗೆ ನೀಡಲಾಗುವ ಉತ್ತರಗಳು ಸಾರ್ವಜನಿಕ ಮಾಹಿತಿಯಾಗುತ್ತದೆ ಅವುಗಳನ್ನು ನಿಯಂತ್ರಿಸುವ ಯಾವುದೇ ನಿಯಮಗಳಿಲ್ಲ ಎಂದು ಮಹುವಾ ಹೇಳಿದ್ದರು.
ಸದನದಲ್ಲಿ ಜೈ ಹಿಂದ್, ವಂದೇ ಮಾತರಂ ಘೋಷಣೆ ಕೂಗಬಾರದು ಮತ್ತು ಭಿತ್ತಿಪತ್ರಗಳನ್ನು ಪ್ರದರ್ಶಿಸಬಾರದು. ಸಭಾಪತಿಗಳು ಮಾತನಾಡುತ್ತಿರುವಾಗ ಅವರಿಗೆ ಬೆನ್ನು ಹಾಕಿ ಕುಳಿತಿರಬಾರದು ಮತ್ತು ಸಭೆಯಿಂದ ಹೊರನಡೆಯಬಾರದು ಎಂದೂ ಸೂಚಿಸಲಾಗಿದೆ. ಸಂಸದರು ನೇರವಾಗಿ ಸಭಾಪತಿಗಳ ಬಳಿ ಹೋಗುವಂತಿಲ್ಲ, ಬದಲು ಹೇಳಲೇನಾದರೂ ಇದ್ದರೆ ಅದನ್ನು ಚೀಟಿಯಲ್ಲಿ ಬರೆದು ಅಲ್ಲಿನ ಸಿಬ್ಬಂದಿಗಳ ಮೂಲಕ ಸಭಾಪತಿಗಳಿಗೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ
ಸಂಸದರು ಲಿಖಿತ ಭಾಷಣ ಓದಬಾರದು ಮತ್ತು ಹೊಸ ಸದಸ್ಯರ ಭಾಷಣಗಳು 15 ನಿಮಿಷ ಮೀರಬಾರದು ಎಂಬುದನ್ನೂ ತಿಳಿಸಲಾಗಿದೆ. ಪ್ರತಿ ದಿನ ಹಾಜರಾತಿಯನ್ನು ದಾಖಲಿಸಬೇಕು ಎಂದು ಸದಸ್ಯರಿಗೆ ಸೂಚಿಸಲಾಗಿದೆ.