ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಸೂಚಿಸಿ: ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಆಗ್ರಹ
ಎಂ.ಕೆ.ಸ್ಟಾಲಿನ್| Photo: PTI
ಚೆನ್ನೈ: 2018ರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಕಾವೇರಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ಶನಿವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಮಿಳುನಾಡು ತನ್ನ ಅಚ್ಚುಕಟ್ಟು ಪ್ರದೇಶವನ್ನು ವಿಸ್ತರಿಸಿದೆ ಎಂಬ ನೆರೆರಾಜ್ಯವಾದ ಕರ್ನಾಟಕದ ಆರೋಪವನ್ನು ಅಲ್ಲಗಳೆದಿದ್ದಾರೆ ಎಂದು deccanherald.com ವರದಿ ಮಾಡಿದೆ.
ಕಾವೇರಿ ನೀರು ಬಿಡುಗಡೆಗೆ ಆಗ್ರಹಿಸಿ ತಮಿಳುನಾಡು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಂಸದರ ನಿಯೋಗವು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಶೆಖಾವತ್ ಅವರನ್ನು ಭೇಟಿ ಮಾಡಲಿದೆ.
ಫೆಬ್ರವರಿ 2, 2018ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಸೂತ್ರದಂತೆ ಕರ್ನಾಟಕವು ಅನುಪಾತ ವ್ಯವಸ್ಥೆಯನ್ನು ಅನುಸರಿಸುತ್ತಿಲ್ಲ ಎಂದು ತಮ್ಮ ವಿಸ್ತೃತ ಹೇಳಿಕೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದಾರೆ. ಸೆಪ್ಟೆಂಬರ್ 14ರವರೆಗೆ ತಮಿಳುನಾಡು 103.5 ಟಿಎಂಸಿ ಅಡಿಯಷ್ಟು ನೀರನ್ನು ಕರ್ನಾಟಕದಿಂದ ಸ್ವೀಕರಿಸಬೇಕಿತ್ತು. ಆದರೆ, ರಾಜ್ಯವು ಕೇವಲ 38.4 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಸ್ವೀಕರಿಸಿದ್ದು, ಇದರಿಂದ 65.1 ಟಿಎಂಸಿ ಅಡಿಯಷ್ಟು ನೀರಿನ ಕೊರತೆಯುಂಟಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ.
ತಿಂಗಳ ವೇಳಾಪಟ್ಟಿಯಂತೆ ಕರ್ನಾಟಕವು ನೀರನ್ನು ಯಾವುದೇ ಅಡೆತಡೆಯಿಲ್ಲದೆ ಹರಿಸಬೇಕು ಎಂದು ತಮಿಳುನಾಡು ಆಗ್ರಹಿಸುತ್ತಿದ್ದರೆ, ನಮ್ಮ ರಾಜ್ಯದ ಜನರು ಹಾಗೂ ರೈತರ ಅಗತ್ಯವನ್ನು ಪೂರೈಸಿದ ನಂತರವಷ್ಟೇ ನಮ್ಮ ರಾಜ್ಯ ತಮಿಳುನಾಡಿಗೆ ನೀರು ಹರಿಸಲಿದೆ ಎಂದು ಕರ್ನಾಟಕ ಪಟ್ಟು ಹಿಡಿದಿದೆ.