NRC ಸಂದರ್ಭದಲ್ಲಿ ತೊಂದರೆಗೊಳಗಾಗಿರುವ ಸುಮಾರು 9 ಲಕ್ಷ ಮಂದಿಗೆ ಕೇಂದ್ರದಿಂದ ಆಧಾರ್ ಕಾರ್ಡ್ ಹಂಚಿಕೆ : ಹಿಮಂತ್ ಬಿಸ್ವ ಶರ್ಮ
ಹಿಮಂತ್ ಬಿಸ್ವ ಶರ್ಮ | PC : PTI
ಗುವಾಹಟಿ : ರಾಷ್ಟ್ರೀಯ ಪೌರತ್ವ ನೋಂದಣಿಯ ಸಂದರ್ಭದಲ್ಲಿ ತೊಂದರೆಗೊಳಗಾಗಿರುವ ಸುಮಾರು 9 ಲಕ್ಷ ಮಂದಿಗೆ ಆಧಾರ್ ಕಾರ್ಡ್ ಹಂಚಿಕೆ ಮಾಡಲು ಕೇಂದ್ರ ಸರಕಾರವು ಬಯೊಮೆಟ್ರಿಕ್ ನೋಂದಣಿಯನ್ನು ತೆರೆದಿದೆ ಎಂದು ಬುಧವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ತಿಳಿಸಿದ್ದಾರೆ.
ಪ್ರಾಯೋಗಿಕ ಆಧಾರದಲ್ಲಿ ಸೆಪ್ಟೆಂಬರ್ 23ರಂದು ಯುಐಡಿಎಐ 12,000-13,000 ಆಧಾರ್ ಕಾರ್ಡ್ ಗಳನ್ನು ತಿನ್ಸುಕಿಯಗೆ ಕಳುಹಿಸಿಕೊಡಲಿದೆ ಎಂದು ಅವರು ಹೇಳಿದ್ದಾರೆ.
NRC-ಬಿಎಂಇ ನೋಂದಣಿಯ ಸಂದರ್ಭದಲ್ಲಿ ನಿರ್ಬಂಧಕ್ಕೊಳಗಾಗಿದ್ದ 9.35 ಲಕ್ಷ ಮಂದಿಗೆ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು ಬಯೊಮೆಟ್ರಿಕ್ ನೋಂದಣಿಯನ್ನು ತೆರೆದಿದ್ದು, ಇಲ್ಲಿಯವರೆಗೆ 5 ಲಕ್ಷ ಆಧಾರ್ ಕಾರ್ಡ್ ಗಳನ್ನು ಸೃಷ್ಟಿಸಲಾಗಿದೆ ಎಂದು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿಯಿಂದ ಆಗಸ್ಟ್ 2019ರ ನಡುವೆ ಒಟ್ಟು 9,35,682 ಮಂದಿ ಆಧಾರ್ ಕಾರ್ಡ್ ಗಾಗಿ ಬಯೊಮೆಟ್ರಿಕ್ ನೋಂದಣಿ ಮಾಡಿದ್ದು, ರಾಷ್ಟ್ರೀಯ ಪೌರತ್ವ ನೋಂದಣಿ ಕೇಂದ್ರಗಳ ಬಳಿ ಈ ಸಂಖ್ಯೆ ದ್ವಿಗುಣಗೊಂಡಿತ್ತು. ಯಾಕೆಂದರೆ, ಈ ಜನರ ಬಯೊಮೆಟ್ರಿಕ್ ನೋಂದಣಿಯು ಬೀಗಮುದ್ರೆಗೊಳಗಾಗಿತ್ತು ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿತ್ತು ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಇತ್ತೀಚೆಗೆ ಆಧಾರ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರು, ಅರ್ಜಿಯೊಂದಿಗೆ NRC ಅರ್ಜಿ ಸ್ವೀಕೃತಿ ಪತ್ರದ ಸಂಖ್ಯೆಯನ್ನು ಒದಗಿಸಬೇಕು ಎಂದು ಶರ್ಮ ಆದೇಶಿಸಿದ್ದರು. ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿಸಿದ್ದ ಜನಸಂಖ್ಯೆಗಿಂತ ಹೆಚ್ಚು ಮಂದಿ ಆಧಾರ್ ಕಾರ್ಡ್ ನೋಂದಣಿಗೆ ಅರ್ಜಿ ಸಲ್ಲಿಸಿರುವುದು ಇದಕ್ಕೆ ಕಾರಣ ಎಂದು ಅವರು ಕಾರಣ ನೀಡಿದ್ದರು.