ವಿತ್ತವರ್ಷ 25ಕ್ಕೆ ನರೇಗಾಕ್ಕೆ ಹೆಚ್ಚುವರಿ ಹಣಕಾಸು ನೀಡಲು ಕೇಂದ್ರದ ನಕಾರ: ವರದಿ

ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ವಿತ್ತವರ್ಷ 2025ರಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ)ಗೆ ಹೆಚ್ಚುವರಿ ಹಣಕಾಸನ್ನು ತಾನು ಬಿಡುಗಡೆಗೊಳಿಸುವುದಿಲ್ಲ ಎಂದು ಕೇಂದ್ರ ಸರಕಾರವು ಪ್ರಕಟಿಸಿದೆ.
ಹಂಚಿಕೆ ಮಾಡಲಾಗಿರುವ 86,000 ಕೋಟಿ ರೂ.ಇಡೀ ವರ್ಷಕ್ಕೆ ಸಾಕಾಗುತ್ತದೆ ಮತ್ತು ಹಿಂದಿನ ಹಂಚಿಕೆಯಲ್ಲಿ ಬಳಕೆಯಾಗದೆ ಉಳಿದಿರುವ ಹೆಚ್ಚುವರಿ 7,500 ಕೋಟಿ ರೂ.ಉಳಿದ ವೆಚ್ಚಗಳನ್ನು ಸರಿದೂಗಿಸುತ್ತದೆ ಎಂದು ಸರಕಾರವು ಭಾವಿಸಿರುವುದು ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ Financial Express ಸುದ್ದಿಸಂಸ್ಥೆ ವರದಿ ಮಾಡಿದೆ.
ತುಲನಾತ್ಮಕವಾಗಿ ‘ಶ್ರೀಮಂತ’ವಾಗಿರುವ ಕೆಲವು ರಾಜ್ಯಗಳು ಯೋಜನೆಯ ಹಣವನ್ನು ಅನ್ಯ ಉದ್ದೇಶಗಳಿಗಾಗಿ ತಿರುಗಿಸುತ್ತವೆ,ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವ ಯೋಜನೆಯ ಮೂಲ ಉದ್ದೇಶದ ಬದಲು ಅದನ್ನು ಪರ್ಯಾಯ ಆದಾಯದ ಮೂಲವನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ಸರಕಾರವು ಪ್ರತಿಪಾದಿಸಿದೆ.
ಕೋವಿಡ್ ಸಮಯದಲ್ಲಿ ಗ್ರಾಮೀಣ ಸಂಕಷ್ಟ ಉತ್ತುಂಗಕ್ಕೇರಿದ್ದಾಗ ರಾಜ್ಯಗಳು ನರೇಗಾಕ್ಕಾಗಿ 1.1 ಲಕ್ಷ ಕೋಟಿ ರೂ.ಗಳಷ್ಟು ಅತ್ಯಧಿಕ ಹಣವನ್ನು ಪಡೆದಿದ್ದವು. ಅದಕ್ಕೆ ಹೋಲಿಸಿದರೆ ಗ್ರಾಮೀಣ ಉದ್ಯೋಗ ಬೇಡಿಕೆ ತುಲನಾತ್ಮಕವಾಗಿ ಸ್ಥಿರವಾಗಿರುವ ಸಾಮಾನ್ಯ ಸಮಯದಲ್ಲಿ 86,000 ಕೋಟಿ ರೂ.ಗಳು ಸಾಕು ಎಂದು ಅಧಿಕಾರಿ ಹೇಳಿದರು.
ಹಂಚಿಕೆ ಮಾಡಲಾಗಿರುವ 86,000 ಕೋಟಿ ರೂ.ಗಳ ಪೈಕಿ 82,684 ಕೋಟಿ ರೂ.(ಶೇ.96)ಗಳನ್ನು ಈವರೆಗೆ ಬಿಡುಗಡೆಗೊಳಿಸಲಾಗಿದೆ. ಆದರೆ ವಾಸ್ತವಿಕ ವೆಚ್ಚ 94,600 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಹಿಂದಿನ ಹಂಚಿಕೆಗಳಲ್ಲಿ ಬಳಕೆಯಾಗದೆ ಉಳಿದುಕೊಂಡಿದ್ದ ಮೊತ್ತಗಳೂ ಸೇರಿವೆ.
ಇತ್ತೀಚಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇಂದ್ರ ಸರಕಾರದಿಂದ ಬಾಕಿಯುಳಿದಿರುವ ಹಣದ ತಕ್ಷಣ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದರು. ಆದರೂ ಸರಕಾರವು 2024-24ರ ಮುಂಗಡ ಪತ್ರದಲ್ಲಿ ನಿಗದಿಗೊಳಿಸಿದ್ದ ಅದೇ 86,000 ರೂ.ಗಳ ಹಂಚಿಕೆಯನ್ನು ಉಳಿಸಿಕೊಂಡು ಬಂದಿದೆ.