ನೀಟ್ ಫಲಿತಾಂಶ ವಿವಾದ| ದೂರು ಪರಿಹಾರ ಸಮಿತಿ ಸೂಚಿಸಿದರೆ ಮರುಪರೀಕ್ಷೆ ನಡೆಸಲಾಗುವುದು: ಎನ್ಟಿಎ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಈ ವರ್ಷದ ನೀಟ್ ವಿವಾದದ ಕುರಿತಂತೆ ಇಂದು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದೆ. ಈ ಸಂದರ್ಭ ಮಾತನಾಡಿದ ಎನ್ಟಿಎ ನಿರ್ದೇಶಕರು, “ಮರುಪರೀಕ್ಷೆ ನಡೆಸಬೇಕೆಂದು ದೂರು ನಿವಾರಣ ಸಮಿತಿಗೆ ಅನಿಸಿದರೆ, ಅದನ್ನು ನಡೆಸಲಾಗುವುದು,” ಎಂದು ಹೇಳಿದ್ದಾರೆ.
ನೀಟ್ ಫಲಿತಾಂಶಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಹಲವಾರು ಸಂಬಂಧಿತರು ಆಕ್ಷೇಪ ಮತ್ತು ಕಳವಳ ವ್ಯಕ್ತಪಡಿಸಿರುವ ನಡುವೆ ಎನ್ಟಿಎ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಹೊಸದಾಗಿ ರಚಿಸಲಾದ ಸಮಿತಿಯ ಶಿಫಾರಸುಗಳಂತೆಯೇ ಯಾವುದಾದರೂ ನಿರ್ಧಾರ ಕೈಗೊಳ್ಳಲಾಗುವುದು, ಪ್ರಕ್ರಿಯೆ ನ್ಯಾಯಯುತ ಮತ್ತು ಪಾರದರ್ಶಕವಾಗಿರಲಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಷ ಹಲವಾರ ಅಗ್ರ ಶ್ರೇಯಾಂಕಿತ ಅಭ್ಯರ್ಥಿಗಳಿರುವುದು ಮಾರ್ಕ್ಗಳ ಹೆಚ್ಚಳದಿಂದ ಸಂಭವಿಸಿದೆ ಎಂಬ ಆರೋಪಗಳಿವೆ. ಹರ್ಯಾಣದ ಒಂದೇ ಕೇಂದ್ರದ ಆರು ಮಂದಿ ಅಗ್ರ ರ್ಯಾಂಕ್ ಪಡೆದಿರುವುದೂ ಹಲವಾರು ಪ್ರಶ್ನೆಗಳನ್ನೆತ್ತಿದೆ. ಆದರೆ ಎನ್ಟಿಯ ಅವ್ಯವಹಾರಗಳನ್ನು ನಿರಾಕರಿಸಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳನ್ನೂ ಎನ್ಟಿಎ ನಿರಾಕರಿಸಿದೆ ಹಾಗೂ ಗ್ರೇಸ್ ಅಂಕಗಳನ್ನು ನೀಡಿರುವುದು ಒಟ್ಟಾರೆ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಪರಿಶೀಲನೆಯಲ್ಲಿರುವ 1,600 ವಿದ್ಯಾರ್ಥಿಗಳ ಫಲಿತಾಂಶಗಳನ್ನು ಮರುಬಿಡುಗಡೆಗೊಳಿಸುವುದು ಪ್ರವೇಶಾತಿ ಪ್ರಕ್ರಿಯೆಯನ್ನು ಬಾಧಿಸದು ಎಂದು ಎನ್ಟಿಎ ನಿರ್ದೇಶಕರು ಹೇಳಿದ್ದಾರೆ.
ಈ ನಡುವೆ ಕಳೆದ ತಿಂಗಳ ನೀಟ್ ಅಂಡರ್ ಗ್ರಾಜುವೇಟ್ 2024 ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ ಹಾಗೂ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದೆ.
ನೀಟ್ ಫಲಿತಾಂಶಗಳಲ್ಲಿ ನಡೆದ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕೆಂದು ಕೇರಳ ಕಾಂಗ್ರೆಸ್ ಆಗ್ರಹಿಸಿದೆ.