ಏಳು ವರ್ಷಗಳಲ್ಲಿ ಭಾರತದಲ್ಲಿ ವಿಮಾನಗಳ ಸಂಖ್ಯೆ ದುಪ್ಪಟ್ಟಾಗಲಿದೆ: ನಾಗರಿಕ ವಾಯುಯಾನ ಸಚಿವಾಲಯ ಅಂದಾಜು
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಭಾರತದೊಳಗೆ ಸರಕುಗಳು ಹಾಗೂ ಪ್ರಯಾಣಿಕರನ್ನು ಸಾಗಿಸುವ ವಿಮಾನಗಳ ಸಂಖ್ಯೆಯು ಮುಂದಿನ ಏಳು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಲಿದ್ದು, 1600ಕ್ಕೆ ತಲುಪಲಿದೆಯೆಂದು ನಾಗರಿಕ ವಾಯುಯಾನ ಸಚಿವಾಲಯ ತಿಳಿಸಿದೆ.
ಇತ್ತೀಚೆಗೆ ಭಾರತೀಯ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನತಯಾರಕ ಸಂಸ್ಥೆಗಳ ನಡುವೆ ನಡೆದ ಬೃಹತ್ ಒಪ್ಪಂದಗಳಿಗೆ ಅಂಕಿತ ಬಿದ್ದಿರುವ ಹಿನ್ನೆಲೆಯಲ್ಲಿ ಸರಕಾರವು ಈ ಅಂದಾಜನ್ನು ಮಾಡಿದೆ. ಭಾರತದಲ್ಲಿ ಪ್ರಸಕ್ತ 729 ವಿಮಾನಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಅದು ಮಾಹಿತಿ ನೀಡಿದೆ.
ಮಾಧ್ಯಮ ವರದಿಗಳ ಪ್ರಕಾರ,ಈ ವರ್ಷದ ಮೊದಲ ಉತ್ತರಾರ್ಧದಲ್ಲಿ ಟಾಟಾ ಮಾಲಕತ್ವದ ಏರ್ ಇಂಡಿಯಾ ಹಾಗೂ ಇನ್ನೊಂದು ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ, ಒಟ್ಟು 970 ವಿಮಾನಗಳ ತಯಾರಿಗೆ ವಿಮಾನ ತಯಾರಕ ಸಂಸ್ಥೆಗಳಾದ ಏರ್ಬಸ್ ಹಾಗೂ ಬೋಯಿಂಗ್ಗಳಿಗೆ ಆರ್ಡರ್ ಸಲ್ಲಿಸಿವೆ. ಭಾರತದ ನೂತನ ವಾಯುಯಾನ ಸಂಸ್ಥೆ ಆಕಾಶ್ ಕ್ಯಾರಿಯರ್ ಕೂಡಾ ತಾನು ಈ ವರ್ಷದ ಅಂತ್ಯದಲ್ಲಿ ಮೂರು ಅಂಕಿಗಳ ವಿಮಾನ ತಯಾರಿಗೆ ಆರ್ಡರ್ ನೀಡುವುದಾಗಿ ತಿಳಿಸಿದೆ. ವಿಮಾನಯಾನ ಸಂಸ್ಥೆಗಳ ಅವಶ್ಯಕತೆಗಳನ್ನು ಈಡೇರಿಸಲು ತನ್ನ ವಿಮಾನನಿಲ್ದಾಣಗಳ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಲಿದೆಯೆಂದು ನಾಗರಿಕ ವಾಯುಯಾನ ಸಚಿವಾಲಯ ತಿಳಿಸಿದೆ.
ಈ ಮಧ್ಯೆ 2024-2025ರಲ್ಲಿ ವಿಮಾನನಿಲ್ದಾಣಗಳ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 1 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ. ಏರ್ ಇಂಡಿಯಾ ಸಂಸ್ಥೆಯೊದೇ 470 ಜೆಟ್ ಗಳ ಖರೀದಿಗಾಗಿ 6.4 ಕೋಟಿ ರೂ.ವೆಚ್ಚ ಮಾಡುವುದಾಗಿ ತಿಳಿಸಿತ್ತು.