ಒಡಿಶಾ: ದೈಹಿಕ ಸದೃಢತೆ ಪರೀಕ್ಷೆಯಲ್ಲಿ ಪಾಲ್ಗೊಂಡ ಮೂವರು ಅಭ್ಯರ್ಥಿಗಳ ಸಾವು

ಸಾಂದರ್ಭಿಕ ಚಿತ್ರ | PC : freepik.com
ಭುವನೇಶ್ವರ: ಒಡಿಶಾದ ಸುಂದರಗಢ ಹಾಗೂ ಕಿಯೊಂಜಾರ್ ಜಿಲ್ಲೆಗಳಲ್ಲಿ ರಾಜ್ಯ ಸರಕಾರದ ವಿವಿಧ ಹುದ್ದೆಗಳಿಗೆ ಒಡಿಶಾ ಅಧೀನ ಸಿಬ್ಬಂದಿ ಆಯ್ಕೆ ಆಯೋಗವು ಈ ವಾರ ಆಯೋಜಿಸಿದ್ದ ದೈಹಿಕ ಸದೃಢತೆ ಪರೀಕ್ಷೆಯ ಸಂದರ್ಭದಲ್ಲಿ ಮೂವರು ಅಭ್ಯರ್ಥಿಗಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮೃತಪಟ್ಟವರನ್ನು ಪ್ರವೀಣ್ ಪಂಡಾ, ಬ್ಯೊಮ್ಕೇಶ್ ನಾಯಕ್ ಹಾಗೂ ಗ್ಯಾನರಂಜನ್ ಜೆನಾ ಎಂದು ಗುರುತಿಸಲಾಗಿದೆ. ಅರಣ್ಯ ಕಾವಲುಗಾರ, ಅರಣ್ಯಪಾಲಕ ಹಾಗೂ ಜಾನುವಾರು ನಿರೀಕ್ಷಕ ಹುದ್ದೆಗಳಿಗಾಗಿನ ನೇಮಕಾತಿ ಪ್ರಕ್ರಿಯೆಯ ಭಾಗವಾಗಿ ದೈಹಿಕ ಸದೃಢತೆ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ಪ್ರಕಾರ ಈ ಮೂವರನ್ನು 25 ಕಿ.ಮೀ.ದೂರದವರೆಗೆ ನಡೆಸುವಂತೆ ಮಾಡಲಾಗಿತ್ತು. ಬಳಿಕ ಇವರು ಕುಸಿದುಬಿದ್ದು ಸಾವನ್ನಪ್ಪಿದ್ದರು.
ಆದರೆ ಇವರ ಸಾವಿಗೆ ಕಾರಣವೇನೆಂಬುದು ತಕ್ಷಣವೇ ದೃಢಪಟ್ಟಿಲ್ಲ. ಆದಾಗ್ಯೂ ಬ್ಯೊಮ್ಕೇಶ್ ನಾಯಕ್, ತೀವ್ರ ತಾಪಮಾನದಿಂದಾಗಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.
ಇನ್ನೋರ್ವ ಅಭ್ಯರ್ಥಿ ಪ್ರವೀಣ್ ಪಂಡಾ ಮಂಗಳವಾರ ಸುಂದರಗಡ ಜಿಲ್ಲೆಯ ಪರೀಕ್ಷೆಗೆ ಹಾಜರಾಗಿದ್ದ. ಸುಮಾರು 5 ಕಿ.ಮೀ.ವರೆಗೆ ನಡೆದ ಬಳಿಕ ಅವರು ಕಿರೆಯಿ ಸಮೀಪ ಕುಸಿದುಬಿದ್ದಿದ್ದರು. ಆನಂತರ ಅವರನ್ನು ಜಿಲ್ಲಾ ಮುಖ್ಯ ಕಾರ್ಯಾಲಯದಲ್ಲಿರುವ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಅಲ್ಲಿ ಅವರು ಆಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರೆಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ನಿರ್ಮಲ್ ಮೊಹಪಾತ್ರ ಅವರ ಹೇಳಿಕೆಯನ್ನು ಉಲ್ಲೇಖಿಖಿಸಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ದೈನಿಕ ವರದಿ ಮಾಡಿದೆ.
ಕಿಯೊಂಜಾರ್ ಜಿಲ್ಲೆಯಲ್ಲಿ ಸೋಮವಾರ ನಡೆದ ಪರೀಕ್ಷೆಯಲ್ಲಿ ಪಾಲ್ಗೊಂಡ 150 ಆಕಾಂಕ್ಷಿ ಅಭ್ಯರ್ಥಿಗಳ ಪೈಕಿ ನಾಯಕ್ ಅವರೂ ಒಳಗೊಂಡಿದ್ದಾರೆ. ಪಾದಯಾತ್ರೆಯನ್ನು ಪೂರ್ಣಗೊಳಿಸಿದ ಬಳಿಕ ಆತ ಅಸ್ವಸ್ಥಗೊಂಡಿದ್ದ. ಆನಂತರ ಆತನನ್ನು ಜಿಲ್ಲಾ ಮುಖ್ಯ ಕಾರ್ಯಾಲಯಕ್ಕೆ ಕೊಂಡೊಯ್ಯಲಾಯಿತು. ತರುವಾಯ ಅವರನ್ನು ಕಟಕ್ನಲ್ಲಿರುವ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಜಗತ್ಸಿಂಗ್ಪುರದ ನಿವಾಸಿಯಾದ ಇನ್ನೋರ್ವ ಅಭ್ಯರ್ಥಿ ಜೆನಾ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ಯಾವುದೇ ಸ್ಪಷ್ಟ ವಿವರಗಳು ಲಭ್ಯವಾಗಿಲ್ಲ.
ಅಭ್ಯರ್ಥಿಗಳ ಸಾವಿಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ಅವರ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.