ಒಡಿಶಾ | ಮೂವರಲ್ಲಿ ಅಂಥ್ರಾಕ್ಸ್ ಸೋಂಕು ಪತ್ತೆ
ಅಂಥ್ರಾಕ್ಸ್ ರೋಗ | PC : NDTV
ಕೊರಾಪುಟ್(ಒಡಿಶಾ) : ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ಮೂವರಿಗೆ ಅಂಥ್ರಾಕ್ಸ್ ರೋಗ ತಗಲಿರುವುದು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಲಕ್ಷ್ಮೀಪುರ ಬ್ಲಾಕ್ನಲ್ಲಿ ಮಂಗಳವಾರ ಹಾಗೂ ಶುಕ್ರವಾರದ ನಡುವೆ ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘‘ಮೂವರ ಮಾದರಿಯಲ್ಲಿ ಅಂಥ್ರಾಕ್ಸ್ ಸೋಂಕು ಪತ್ತೆಯಾಗಿದೆ. ಅವರನ್ನು ಚಿಕಿತ್ಸೆಗಾಗಿ ಲಕ್ಷ್ಮೀಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಂಥ್ರಾಕ್ಸ್ ಸೋಂಕಿತ ದನದ ಕಳೇಬರದ ಸಂಪರ್ಕದಿಂದ ಅವರಿಗೆ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ’’ ಎಂದು ಕೊರಾಪುಟ್ನ ಜಿಲ್ಲಾ ಹೆಚ್ಚುವರಿ ವೈದ್ಯಾಧಿಕಾರಿ (ರೋಗ ನಿಯಂತ್ರಣ) ಸತ್ಯ ಸಾಯಿ ಸ್ವರೂಪ್ ಹೇಳಿದ್ದಾರೆ.
ಪರಿಸ್ಥಿತಿ ಅವಲೋಕಿಸಲು ಅಂಥ್ರಾಕ್ಸ್ ಪ್ರಕರಣಗಳು ವರದಿಯಾದ ಕುಟಿಂಗಾ ಗ್ರಾಮಕ್ಕೆ ಆರೋಗ್ಯ ತಜ್ಞರ ತಂಡವನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘‘ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಅಂಥ್ರಾಕ್ಸ್ ರೋಗದ ವಿರುದ್ಧ ನಿಯಂತ್ರಣ ಕ್ರಮಗಳ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ಮಾಹಿತಿ, ಶಿಕ್ಷಣ ಹಾಗೂ ಸಂವಹನ (ಐಇಸಿ) ಉಪಕ್ರಮಗಳನ್ನು ಪೀಡಿತ ಪ್ರದೇಶಗಳಲ್ಲಿ ಆರಂಭಿಸಲಾಗಿದೆ. ಬೆಳವಣಿಗೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅಂದಾಜಿಸಲು ಈ ಗ್ರಾಮ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಆರೋಗ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ’’ ಎಂದು ಸತ್ಯ ಸಾಯಿ ಸ್ವರೂಪ್ ಅವರು ತಿಳಿಸಿದ್ದಾರೆ.