ಒಡಿಶಾ | ಬಿಜೆಪಿ ದೂರಿನ ಬಳಿಕ ಬಿಜೆಡಿ ನಾಯಕನ ಪತ್ನಿ ಐಎಎಸ್ ಅಧಿಕಾರಿಯ ವರ್ಗಾವಣೆ
ಸುಜಾತಾ ಆರ್.ಕಾರ್ತಿಕೇಯನ್ | PC : ANI
ಭುವನೇಶ್ವರ: ಚುನಾವಣಾ ಆಯೋಗವು ಐಎಎಸ್ ಅಧಿಕಾರಿ ಹಾಗೂ ಬಿಜು ಜನತಾ ದಳ (ಬಿಜೆಡಿ) ನಾಯಕ ವಿ.ಕೆ.ಪಾಂಡಿಯನ್ ಅವರ ಪತ್ನಿ ಸುಜಾತಾ ಆರ್.ಕಾರ್ತಿಕೇಯನ್ ಅವರನ್ನು ಒಡಿಶಾದ ಮಿಷನ್ ಶಕ್ತಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಗೊಳಿಸಿದೆ.
ಬಿಜೆಡಿಗೆ ಚುನಾವಣಾ ಲಾಭಗಳಿಗಾಗಿ ಕಾರ್ತಿಕೇಯನ್ ಅವರು ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಕ್ರೋಡೀಕರಿಸಲು ತನ್ನ ಹುದ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು.
ಸೇವೆಯಲ್ಲಿರುವ ಐಎಎಸ್ ಅಧಿಕಾರಿ ವೃತ್ತಿಪರತೆಗೆ ವಿದಾಯ ಹೇಳಿರುವುದು ಮತ್ತು ತನ್ನ ಮೇಲೆ ತನ್ನ ಪತಿಯ ಪ್ರಭಾವದಿಂದಾಗಿ ಬಿಜೆಡಿಯ ಏಜೆಂಟ್ ಆಗಿ ತೊಡಗಿಸಿಕೊಂಡಿರುವುದು ಅತ್ಯಂತ ದುರದೃಷ್ಟದ ಸಂಗತಿಯಾಗಿದೆ ಎಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ರಾಜೀವ್ ಚಂದ್ರಶೇಖರ್ ಹಾಗೂ ಹಿರಿಯ ಬಿಜೆಪಿ ನಾಯಕರಾದ ಸುಧಾಂಶು ತ್ರಿವೇದಿ ಮತ್ತು ಓಂ ಪಾಠಕ್ ಸಲ್ಲಿಸಿದ್ದ ದೂರಿನಲ್ಲಿ ಹೇಳಲಾಗಿತ್ತು.
ಚುನಾವಣೆಗಳು ಮುಗಿಯುವವರೆಗೂ ಕಾರ್ತಿಕೇಯನ್ ಅವರಿಗೆ ಯಾವುದೇ ಹೊಣೆಗಾರಿಕೆಯನ್ನು ನೀಡಬಾರದು ಎಂದು ಆಗ್ರಹಿಸಿರುವ ಬಿಜೆಪಿ,ಅವರು ಬಿಜೆಡಿಯ ಚುನಾವಣಾ ಲಾಭಕ್ಕಾಗಿ ಸಿಸ್ಟಮ್ಯಾಟಿಕ್ ವೋಟರ್ಸ್ ಎಜ್ಯುಕೇಷನ್ ಆ್ಯಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್ (ಸ್ವೀಪ್) ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಅಧಿಕಾರ,ಸರಕಾರಿ ಯಂತ್ರ ಮತ್ತು ಮಾನವ ಶಕ್ತಿಯ ಬಹಿರಂಗ,ನಿರ್ಲಜ್ಜ ದುರುಪಯೋಗದಲ್ಲಿ ತೊಡಗಿದ್ದರು ಎಂದು ಆರೋಪಿಸಿದೆ.