ಒಡಿಶಾ: ಸ್ಮಶಾನದಲ್ಲೂ ಜಾತೀಯತೆ; ದಲಿತರಲ್ಲಿ ತೀವ್ರ ಅಸಮಾಧಾನ
Photo: TOI
ಕೇಂದ್ರಪಾರ: ಒಡಿಶಾದ ಈ ಪಟ್ಟಣದಲ್ಲಿ ಸಾವು ಕೂಡಾ ಸಮಾನತೆಯನ್ನು ತರುವುದಿಲ್ಲ. 1950ರಲ್ಲೇ ಜಾತೀಯತೆ ನಿಷೇಧ ಕಾನೂನು ಜಾರಿಗೆ ಬಂದಿದ್ದರೂ, ಇಲ್ಲಿ ಮಾತ್ರ ಸ್ಮಶಾನದಲ್ಲೂ ಜಾತೀಯತೆ ವಿಜೃಂಭಿಸುತ್ತಿದೆ. ಹಜಾರಿಬಗೀಚಾ ಸ್ಮಶಾನದಲ್ಲಿ ಬ್ರಾಹ್ಮಣರ ಮೃತದೇಹಗಳನ್ನು ಮಾತ್ರ ಸಂಸ್ಕಾರ ಮಾಡಲು ಅವಕಾಶವಿದೆ ಎನ್ನುವ ಒಡಿಶಾದ ಈ ಅತ್ಯಂತ ಹಳೆಯ ನಗರ ಸ್ಥಳೀಯ ಸಂಸ್ಥೆ ಆದೇಶ ಹೊರಡಿಸಿರುವುದು ದಲಿತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬ್ರಾಹ್ಮಣ ಸಂಸ್ಥಾನ ಈ ಸ್ಮಶಾನವನ್ನು 1929ರಿಂದ ನಿರ್ವಹಿಸುತ್ತಾ ಬಂದಿದೆ ಎನ್ನಲಾಗಿತ್ತು. ಆದರೆ 154 ವರ್ಷ ಹಳೆಯ ಸ್ಥಳೀಯ ಸಂಸ್ಥೆ ಇತ್ತೀಚೆಗೆ ಸ್ಮಶಾನದ ಮುಖ್ಯದ್ವಾರದಲ್ಲಿ ಈ ಕುರಿತ ಫಲಕ ಅಳವಡಿಸಿರವುದನ್ನು ಖಂಡಿಸಿ ದಲಿತ ಸಮುದಾಯ ಸರ್ಕಾರಕ್ಕೆ ಪತ್ರ ಬರೆದಿದೆ.
"ಬ್ರಾಹ್ಮಣರಿಗೆ ಮಾತ್ರ ಇರುವ ಈ ಸ್ಮಶಾನವನ್ನು ನಗರ ಸ್ಥಳೀಯ ಸಂಸ್ಥೆ ಸುಧೀರ್ಘ ಅವಧಿಯಿಂದ ನಿರ್ವಹಿಸುತ್ತಿದೆ ಎಂದು ತಿಳಿದು ಅತ್ಯಂತ ಅಚ್ಚರಿಯಾಗಿದೆ. ಇದರಲ್ಲಿ ಜಾತಿಭೇದವಿಲ್ಲದೇ ಎಲ್ಲ ಹಿಂದೂಗಳ ಶವಸಂಸ್ಕಾರಕ್ಕೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಆದರೆ ಅಧಿಕಾರಿಗಳು ಇದನ್ನು ಪರಿಗಣಿಸಿಲ್ಲ" ಎಂದು ದಲಿತ ಮುಖಂಡ ಮತ್ತು ಒಡಿಶಾ ದಲಿತ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರ ಜೆನಾ ಅಭಿಪ್ರಾಯಪಟ್ಟಿದ್ದಾರೆ.
"ಕೇಂದ್ರಪಾರ ಪಟ್ಟಣದಲ್ಲಿ ಕೇವಲ ಬ್ರಾಹ್ಮಣರಿಗಾಗಿ ಸ್ಮಶಾನವನ್ನು ನಿರ್ವಹಿಸುತ್ತಾ ಬಂದಿರುವ ಸ್ಥಳೀಯ ಸಂಸ್ಥೆಯ ಈ ಕ್ರಮ ಕಾನೂನುಬಾಹಿರ" ಎಂದು ಸಿಪಿಎಂ ಜಿಲ್ಲಾ ಘಟಕದ ಅಧ್ಯಕ್ಷ ಗಯಾಧರ್ ಧಾಲ್ ಹೇಳಿದ್ದಾರೆ. ಅದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರಪಾರ ನಗರಸಭೆ ಕಾರ್ಯನಿರ್ವಾಹಕ ಅಧಿಕಾರಿ ಪ್ರಫುಲ್ಲಚಂದ್ರ ಬಿಸ್ವಾಲ್, "1928ರಿಂದಲೂ ಈ ಬ್ರಾಹ್ಮಣ ಸಂಸ್ಥಾನ ಸ್ಮಶಾನವನ್ನು ನಗರಸಭೆ ನಿರ್ವಹಿಸುತ್ತಾ ಬಂದಿದೆ. ಈ ಬಗ್ಗೆ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.