ಒಡಿಶಾ: ಕಾಂಗ್ರೆಸ್ ಕೇಂದ್ರ ಕಚೇರಿ ಧ್ವಂಸ; ರಾಜ್ಯಾಧ್ಯಕ್ಷರ ಮೇಲೆ ಮಸಿ ದಾಳಿ
ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದ ಕಾಂಗ್ರೆಸ್
ಸರತ್ ಪಟ್ಟನಾಯಕ್ | PC: thehindu.com
ಭುವನೇಶ್ವರ: ಅಪರಿಚಿತ ದುಷ್ಕರ್ಮಿಗಳು ಒಡಿಶಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸರತ್ ಪಟ್ಟನಾಯಕ್ ಮೇಲೆ ಮಸಿ ದಾಳಿ ನಡೆಸಿರುವ ಘಟನೆ ಭುವನೇಶ್ವರದಲ್ಲಿನ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಬೆಳಗ್ಗೆ ಸುಮಾರು 11.30ರ ವೇಳೆಗೆ ಕಾಂಗ್ರೆಸ್ ಮುಖ್ಯ ಕಚೇರಿಗೆ ಆಗಮಿಸಿದ ದುಷ್ಕರ್ಮಿಗಳು, ಕಾಂಗ್ರೆಸ್ ಭವನವನ್ನು ಧ್ವಂಸಗೊಳಿಸಿ, ಪಟ್ಟನಾಯಕ್ ಅವರ ಕೊಠಡಿಯ ಬಾಗಿಲನ್ನೂ ವಿರೂಪಗೊಳಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಈ ದಾಳಿಯ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದೆ.
ಈ ದಾಳಿಯ ಸಂದರ್ಭದಲ್ಲಿ ನನ್ನ ಎಡಗಣ್ಣಿಗೆ ಕೊಂಚ ಗಾಯವಾಗಿದೆ ಎಂದು ಸರತ್ ಪಟ್ಟನಾಯಕ್ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಕಾಂಗ್ರೆಸ್ ಕಳವಳ ಮತ್ತು ಖಂಡನೆಯನ್ನು ವ್ಯಕ್ತಪಡಿಸಿದೆ. ಈ ಘಟನೆಯ ಹಿಂದೆ ಬಿಜೆಪಿ ಅಥವಾ ಪ್ರತಿಸ್ಪರ್ಧಿ ಬಣಗಳ ಕೈವಾಡವಿರುವ ಶಂಕೆಯನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.
ಆದರೆ, ಕಾಂಗ್ರೆಸ್ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ವಕ್ತಾರ ದಿಲೀಪ್ ಮಲ್ಲಿಕ್, ಈ ಘಟನೆಯು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತದಿಂದಾಗಿ ನಡೆದಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.