ಒಡಿಶಾ ವಿಧಾನ ಸಭೆ ಚುನಾವಣೆ | 80 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು
ಸಾಂದರ್ಭಿಕ ಚಿತ್ರ
ಭುವನೇಶ್ವರ : ಒಡಿಶಾ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 80 ಕ್ಷೇತ್ರಗಳಲ್ಲಿ ಜಯ ಗಳಿಸಿದೆ ಎಂದು ಚುನಾವಣಾ ಆಯೋಗದ ದತ್ತಾಂಶ ತಿಳಿಸಿದೆ.
ವಿಧಾನ ಸಭೆಯ ಒಟ್ಟು 147 ಸ್ಥಾನಗಳಲ್ಲಿ ಬಿಜು ಜನತಾದಳ 49 ಸ್ಥಾನಗಳನ್ನು ಗೆದ್ದುಕೊಂಡಿದೆ ಎಂದು ಅದು ಹೇಳಿದೆ.
ಬೋಲಂಗಿರ್ ಜಿಲ್ಲೆಯ ಕಾಂತಾಬಾಂಜಿ ವಿಧಾನ ಸಭಾ ಕ್ಷೇತ್ರದಲ್ಲಿ ಒಡಿಶಾ ಮುಖ್ಯಮಂತ್ರಿ ಹಾಗೂ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಬಿಜೆಪಿಯ ಲಕ್ಷ್ಮಣ್ ಬಾಗ್ ಅವರ ವಿರುದ್ಧ ಸೋಲನುಭವಿಸಿದ್ದಾರೆ.
ಆದರೆ, ಗಂಜಾಮ್ ಜಿಲ್ಲೆಯ ಹಿಂಜಿಲಿ ಕ್ಷೇತ್ರದಲ್ಲಿ ಬಿಜೆಡಿ ಮುಖ್ಯಸ್ಥರು ಬಿಜೆಪಿಯ ತನ್ನ ಪ್ರತಿಸ್ಪರ್ಧಿ ಸಿಸಿರ್ ಕುಮಾರ್ ಮಿಶ್ರಾ ವಿರುದ್ಧ ಗೆಲುವು ಗಳಿಸಿದ್ದಾರೆ. ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ.
ಚಿಲಿಕಾ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೃಥ್ವಿರಾಜ್ ಹೇರ್ ಚಂದ್ರನ್ ಅವರು ತಮ್ಮ ಸಮೀಪದ ಬಿಜೆಡಿ ಪ್ರತಿಸ್ಪರ್ಧಿ ರಘುನಾಥ್ ಸಾಹು ಅವರನ್ನು 4,566 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಾರ್ಗಡ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿಜೆಡಿಯ ಅಶ್ವಿನಿ ಕುಮಾರ್ ಸಾರಂಗಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಡಿಯ ದೇಬೇಶ್ ಆಚಾರ್ಯ ಅವರನ್ನು 4,772 ಮತಗಳಿಂದ ಸೋಲಿಸಿದ್ದಾರೆ.
ರಘುನಾಥಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ದುರ್ಗಾಪ್ರಸಾದ್ ತಂತಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಡಿಯ ಅರ್ಚನರೇಖಾ ಬೆಹಾರ ಅವರನ್ನು 5,774 ಮತಗಳ ಅಂತರದಿಂದ ಸೋಲಿಸಿದ್ದಾರೆ.