ಬುಡಕಟ್ಟು ಬಾಲಕಿಯರಿಗೆ ಲೈಂಗಿಕ ಕಿರುಕುಳ: ಅಧಿಕಾರಿಯ ಬಂಧನ
ಇಂದೋರ್: ಬುಡಕಟ್ಟು ಜನಾಂಗದ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಧ್ಯಪ್ರದೇಶದ ಝಬೂವಾ ಜಿಲ್ಲೆಯ ಉಪವಿಭಾಗ ಮ್ಯಾಜಿಸ್ಟ್ರೇಟ್ ಸುನೀಲ್ ಕುಮಾರ್ ಝಾ ಎಂಬಾತನನ್ನು ಬಂಧಿಸಲಾಗಿರುವ ಬಗ್ಗೆ ವರದಿಯಾಗಿದೆ.
ಝಾ ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಇದೀಗ ಸೆರೆಮನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
"ಸರ್ಕಾರಿ ಹಾಸ್ಟೆಲ್ನ ಪ್ರಾಚಾರ್ಯರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 354, 354 ಎ, ಪೋಕ್ಸೋ ಕಾಯ್ದೆ ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ" ಎಂದು ಝಬೂವಾ ಎಸ್ಪಿ ಆಗಮ್ ಜೈನ್ ಹೇಳಿದ್ದಾರೆ.
ಹಾಸ್ಟೆಲ್ ಗೆ ದಿಢೀರ್ ಭೇಟಿ ನೀಡಿದ್ದ ಸುನೀಲ್ ಝಾ, 13 ಮತ್ತು 11 ವರ್ಷದ ಮೂವರು ಬಾಲಕಿಯರ ಮೇಲೆ ಅಶ್ಲೀಲ ಕೃತ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಭಾನುವಾರ ಸಂಜೆ 3.30ಕ್ಕೆ ಝಾ ಆಗಮಿಸಿದ್ದು, ಬಾಲಕಿಯರ ಜತೆ ಚರ್ಚಿಸಬೇಕಾಗಿದೆ ಎಂದು ನೆಪ ಹೇಳಿ ಉಳಿದವರನ್ನು ಕೊಠಡಿಯಿಂದ ಹೊರ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆಹಾರ ಕ್ರಮದ ಬಗ್ಗೆ ಹಾಗೂ ಸಮರ್ಪಕವಾಗಿ ಊಟ ಮತ್ತು ತಿಂಡಿ ಸಿಗುತ್ತದೆಯೇ ಎಂದು ಪ್ರಶ್ನಿಸಿದ ಸುನೀಲ್ ಝಾ, ಬಳಿಕ ಬಾಲಕಿಯರ ಬೆಡ್ ಮೇಳೆ ಕುಳಿತು ಅಸಭ್ಯವಾಗಿ ಅವರನ್ನು ಸ್ಪರ್ಶಿಸಿದ್ದಾರೆ ಹಾಗೂ ಅವರ ಋತುಚಕ್ರದ ಅವಧಿ ಸೇರಿದಂತೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದಾರೆ. ಬಾಲಕಿಯರನ್ನು ಆಲಂಗಿಸಿಕೊಂಡು ಒಬ್ಬಾಕೆಯನ್ನು ತಡಕಾಡಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ.
ಪ್ರಾಚಾರ್ಯರು ದೂರು ನೀಡಿದ ತಕ್ಷಣವೇ ಎಫ್ಐಆರ್ ದಾಖಲಿಸಲಾಗಿದೆ. ಝಾ ಉಪ ವಿಭಾಗಾಧಿಕಾರಿ ಶ್ರೇಣಿಯ ಅಧಿಕಾರಿಯಾಗಿದ್ದು, ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ವಿಭಾಗೀಯ ಆಯುಕ್ತ ಡಾ.ಪವನ್ ಶರ್ಮಾ ಹೇಳಿದ್ದಾರೆ.