ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣ, 2016ರ ಆದೇಶವು ಪೂರ್ವಾನ್ವಯವಾಗುತ್ತದೆ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಸಿಬಿಐ ಹಿರಿಯ ಸರಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವ ಮುನ್ನ ಕೇಂದ್ರದ ಅನುಮತಿಯನ್ನು ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಿದ್ದ ಕಾನೂನು ನಿಬಂಧನೆಯನ್ನು ರದ್ದುಗೊಳಿಸಿದ್ದ ತನ್ನ 2014ರ ತೀರ್ಪು ಪೂರ್ವಾನ್ವಯಗೊಳ್ಳುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತೀರ್ಪು ನೀಡಿದೆ. ಈ ತೀರ್ಪಿನ ಪ್ರಕಾರ 2014ಕ್ಕಿಂತ ಮೊದಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಹಿರಿಯ ಸರಕಾರಿ ಅಧಿಕಾರಿಗಳೂ ಇನ್ನು ಮುಂದೆ ಬಂಧನದಿಂದ ವಿನಾಯಿತಿ ಪಡೆಯುವಂತಿಲ್ಲ.
ದಿಲ್ಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆಯ ಕಲಂ 6ಎ ಅನ್ನು ರೂಪಿಸಿದ್ದ 2003, ಸೆಪ್ಟಂಬರ್ ಮತ್ತು ಅದನ್ನು ಅಸಿಂಧು ಎಂದು ಘೋಷಿಸಿದ್ದ 2014, ಮೇ ನಡುವೆ ದಾಖಲಾದ ಪ್ರಕರಣಗಳಲ್ಲಿ ಇಂತಹ ಉದ್ಯೋಗಿಗಳು ಬಂಧನದಿಂದ ರಕ್ಷಣೆ ಪಡೆಯುವುದಿಲ್ಲ ಎಂದು ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಸೋಮವಾರ ಘೋಷಿಸಿತು.
ಕಾಯ್ದೆಯ ಕಲಂ 6ಎ ಜಂಟಿ ಕಾರ್ಯದರ್ಶಿ ಮತ್ತು ಮೇಲಿನ ಮಟ್ಟದ ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಬಿಐನಿಂದ ಪ್ರಾಥಮಿಕ ತನಿಖೆಗೆ ಒಳಗಾಗುವುದರಿಂದಲೂ ವಿನಾಯಿತಿಯನ್ನು ನೀಡಿತ್ತು.
ಈ ನಿಬಂಧನೆಯನ್ನು ಅಸಾಂವಿಧಾನಿಕ ಎಂದು 2014ರಲ್ಲಿ ಘೋಷಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಅದು ಭ್ರಷ್ಟಾಚಾರ ಪ್ರಕರಣಗಳಲ್ಲಿ ಹಿರಿಯ ಅಧಿಕಾರಿಗಳನ್ನು ಪತ್ತೆ ಹಚ್ಚಲು ಅಡ್ಡಿಯನ್ನುಂಟು ಮಾಡುತ್ತದೆ ಎಂದು ಹೇಳಿತ್ತು.