ಸರ್ಕಾರಿ ಭೂಮಿ ಒತ್ತುವರಿ ಆರೋಪ: ಭಾಗಶಃ ಮಸೀದಿ ಕೆಡವಿದ ಅಧಿಕಾರಿಗಳು

PC: x.com/TimesAlgebraIND
ಲಕ್ನೋ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಮಸೀದಿ ನಿರ್ಮಿಸಿದ ಆರೋಪದಲ್ಲಿ ರವಿವಾರ ಭದ್ರತಾ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಬುಲ್ಡೋಜರ್ ಮೂಲಕ ಮಸೀದಿಯನ್ನು ಭಾಗಶಃ ಕೆಡವಿದ ಘಟನೆ ವರದಿಯಾಗಿದೆ.
ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಮದನಿ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಿದ ರಾಮ್ ಬಚನ್ ಸಿಂಗ್ ಎಂಬ ಸಾಮಾಜಿಕ ಹೋರಾಟಗಾರ ಸಿಎಂ ಪೋರ್ಟಲ್ ನಲ್ಲಿ ಈ ಬಗ್ಗೆ ದೂರು ದಾಖಲಿಸಿ, ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದ.
ಈ ಹಂತದಲ್ಲಿ ಮಸೀದಿಯ ಆಡಳಿತ ಮಂಡಳಿ ಅಲಹಾಬಾದ್ ಹೈಕೋರ್ಟ್ನ ಮೊರೆ ಹೋಗಿತ್ತು. ಒತ್ತುವರಿಯಾದ ಜಾಗದಲ್ಲಿ ನಿರ್ಮಿಸಿದ್ದು ಎನ್ನಲಾದ ಮಸೀದಿಯ ಭಾಗಕ್ಕೆ ಹೈಕೋರ್ಟ್ ಶನಿವಾರದ ವರೆಗೆ ತಡೆಯಾಜ್ಞೆ ನೀಡಿತ್ತು.
ಮಸೀದಿ ನಿರ್ಮಾಣಕ್ಕೆ 15 ವರ್ಷಗಳ ಹಿಂದೆ 32 ಡೆಸಿಮಲ್ ಜಾಗವನ್ನು ಖರೀದಿಸಲಾಗಿತ್ತು. ಮಸೀದಿ 30 ಡೆಸಿಮಲ್ ಜಾಗದಲ್ಲೇ ಇದ್ದು, ಯಾವುದೇ ಒತ್ತುವರಿಯಾಗಿಲ್ಲ ಎನ್ನುವುದು ಮಸೀದಿ ನಿರ್ವಹಿಸುವ ಮುಸ್ಲಿಂ ಸಮುದಾಯದ ವಾದ.
1999ರಲ್ಲೇ ರಾಮ್ಬಚನ್ ಸಿಂಗ್ ಈ ಬಗ್ಗೆ ದೂರು ನೀಡಿದ್ದರು. ಆದರೆ ಆಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಧಿಕೃತ ತನಿಖೆ ಆರಂಭವಾದಾಗ 2023ರ ಡಿಸೆಂಬರ್ ನಲ್ಲಿ ಈ ಪ್ರಕರಣ ಮರು ಹುಟ್ಟು ಪಡೆದಿತ್ತು. ಮಹಾನಗರ ಪಾಲಿಕೆ ಅಧಿಕಾರಿಗಳು ಡಿಸೆಂಬರ್ 23ರಂದು ಕಾನೂನುಬದ್ಧ ದಾಖಲೆಗಳನ್ನು ಸಲ್ಲಿಸುವಂತೆ ಮೂರು ನೋಟಿಸ್ ನೀಡಿತ್ತು. ನೀಡದೇ ಇದ್ದಾಗ ಈ ಕಟ್ಟಡದ ಒಂದು ಭಾಗವನ್ನು ಅಕ್ರಮ ನಿರ್ಮಾಣ ಎಂದು ಘೋಷಿಸಲಾಗಿತ್ತು.
Kushinagar, Uttar Pradesh: Bulldozer action started on Madni Mosque. District administration claims the #Mosque was built on govt land. Mosque committee’s lawyer argues that the demolition is happening without any official order.#BulldozerAction#Kushinagar pic.twitter.com/pLQDBY7oV5
— MuslimMirror.com (@MuslimMirror) February 9, 2025