ಪತ್ನಿ ಜೊತೆಗಿನ ಸಂಭಾಷಣೆ ವೇಳೆ ರೈಲ್ವೆ ಮಾಸ್ಟರ್ ಹೇಳಿದ ʼOKʼಯಿಂದ 3 ಕೋಟಿ ನಷ್ಟ!
ದಾಂಪತ್ಯ ಬಿರುಕಿನಿಂದ ಕೆಲಸ ಕಳೆದುಕೊಂಡು 12 ವರ್ಷ ಕೋರ್ಟ್ ಗೆ ಅಲೆದಾಟ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಪತ್ನಿ ಜೊತೆಗಿನ ಪೋನ್ ಸಂಭಾಷಣೆ ವೇಳೆ ರೈಲ್ವೇ ಸ್ಟೇಷನ್ ಮಾಸ್ಟರ್ ಓರ್ವರು ಹೇಳಿದ ʼಒಕೆ(ok)ʼ ಎಂಬ ಒಂದು ಮಾತು ಅನಾಹುತವನ್ನೇ ಸೃಷ್ಟಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ವಿಚಿತ್ರ ಸ್ಟೋರಿ ಇದಾಗಿದ್ದು, ಒಂದು Okಯಿಂದ ಛತ್ತೀಸ್ಗಢದ ಮಾವೋವಾದಿ ಪೀಡಿತ ಪ್ರದೇಶದ ನಿರ್ಬಂಧಿತ ಮಾರ್ಗದಲ್ಲಿ ಸರಕು ಸಾಗಣೆ ರೈಲು ಸಂಚರಿಸಿ ಭಾರತೀಯ ರೈಲ್ವೆಗೆ 3 ಕೋಟಿ ನಷ್ಟವುಂಟುಮಾಡಿದೆ.
ಈ ಪ್ರಕರಣದಲ್ಲಿಸ್ಟೇಷನ್ ಮಾಸ್ಟರ್ ಉದ್ಯೋಗವನ್ನು ಕಳೆದುಕೊಂಡಿದ್ದು, ಸುದೀರ್ಘ ಕಾನೂನು ಹೋರಾಟದ ಅಂದರೆ 12 ವರ್ಷಗಳ ನಂತರ ಇತ್ತೀಚೆಗೆ ಅವರಿಗೆ ವಿಚ್ಛೇದನ ಸಿಕ್ಕಿದೆ.
ಏನಿದು ಘಟನೆ?:
2011ರ ಅ.12ರಂದು ವಿಶಾಖಪಟ್ಟಣಂ ನಿವಾಸಿ ದಂಪತಿಗಳ ವಿವಾಹ ನಡೆದಿತ್ತು. ವಿವಾಹದ ಬಳಿಕವೂ ಪತ್ನಿ ಮಾಜಿ ಪ್ರಿಯಕರನ ಜೊತೆ ಮಾತುಕತೆ ಮುಂದುವರಿಸಿದ್ದಳು. ಇದರಿಂದಾಗಿ ಪತಿ-ಪತ್ನಿ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಪತಿ ರೈಲ್ವೇಯಲ್ಲಿ ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ರಾತ್ರಿ ಸ್ಟೇಷನ್ ಮಾಸ್ಟರ್ ಕರ್ತವ್ಯದಲ್ಲಿದ್ದಾಗ ಇದೇ ವಿಚಾರಕ್ಕೆ ದಂಪತಿಗಳು ಫೋನ್ ನಲ್ಲಿ ಜಗಳವಾಡಿದ್ದಾರೆ. ಕೊನೆಗೆ ನಾವು ಮನೆಯಲ್ಲಿ ಮಾತಾಡೋಣ ʼOKʼ ಎಂದು ಪತ್ನಿಯಲ್ಲಿ ಹೇಳಿದ್ದರು. ಪೋನ್ ಸಂಭಾಷಣೆ ನಡೆಸಿ ಕೊನೆಗೆ ಕರೆಯನ್ನು OK ಎಂದು ಹೇಳಿ ಕೊನೆಗೊಳಿಸಿದ್ದರು. ಆದರೆ ಈ ವೇಳೆ ಅವರ ಮೈಕ್ರೊಫೋನ್ ಆನ್ ಆಗಿದೆ ಎಂದು ಅವರಿಗೆ ತಿಳಿದಿರಲಿಲ್ಲ. ಇನ್ನೊಂದು ಕಡೆಯಿಂದ ರೈಲ್ವೆ ಸಿಬ್ಬಂದಿ ಲೈನ್ ನಲ್ಲಿದ್ದರು. ಸ್ಟೇಷನ್ ಮಾಸ್ಟರ್ ಪತ್ನಿಗೆ ಹೇಳಿದ OKಯನ್ನು ಮಾವೋವಾದಿ ಪ್ರಾಬಲ್ಯದ ಪ್ರದೇಶಕ್ಕೆ ಗೂಡ್ಸ್ ರೈಲನ್ನು ಕಳುಹಿಸಲು ನೀಡಿದ ಗ್ರೀನ್ ಸಿಗ್ನಲ್ ಎಂದು ತಪ್ಪಾಗಿ ಗ್ರಹಿಸಿದ್ದಾನೆ. ಸ್ಟೇಷನ್ ಮಾಸ್ಟರ್ ಹೇಳಿದ OKಯಿಂದ ಮಾವೋವಾದಿ ಪ್ರಾಬಲ್ಯದ ಪ್ರದೇಶಕ್ಕೆ ಗೂಡ್ಸ್ ರೈಲು ಸಂಚರಿಸಿದೆ. ಅದೃಷ್ಟವಶಾತ್ ಯಾವುದೇ ಅಪಘಾತ ಸಂಭವಿಸಿಲ್ಲ. ಆದರೆ ನಿಯಮಗಳ ಉಲ್ಲಂಘನೆಯಿಂದಾಗಿ, ಭಾರತೀಯ ರೈಲ್ವೆಗೆ 3 ಕೋಟಿ ರೂ.ನಷ್ಟವುಂಟಾಗಿದೆ. ಘಟನೆ ಬಳಿಕ ಸ್ಟೇಷನ್ ಮಾಸ್ಟರ್ ನ್ನು ಅಮಾನತುಗೊಳಿಸಲಾಗಿದೆ.
ಘಟನೆ ಬಳಿಕವೂ ದಾಂಪತ್ಯ ಬಿರುಕು ಮುಂದುವರಿದಿದೆ. ವಿಶಾಖಪಟ್ಟಣಂ ಕೌಟುಂಬಿಕ ನ್ಯಾಯಾಲಯದಲ್ಲಿ ಸ್ಟೇಷನ್ ಮಾಸ್ಟರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿ ಕೂಡ ಪತಿ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿದ್ದರು. ತನಗೆ ಜೀವಕ್ಕೆ ಬೆದರಿಕೆ ಇದೆ ಎಂದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಕರಣವನ್ನು ತನ್ನ ತವರು ನಗರವಾದ ದುರ್ಗ್ಗೆ ವರ್ಗಾಯಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ದುರ್ಗ್ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿದಾಗ, ಅಮಾನತುಗೊಂಡ ರೈಲ್ವೆ ಅಧಿಕಾರಿ ಛತ್ತೀಸ್ಗಢ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ವಿಭಾಗೀಯ ಪೀಠವು ಇತ್ತೀಚೆಗೆ ಅವನ ಮತ್ತು ಅವನ ಕುಟುಂಬದ ವಿರುದ್ಧ ಹೆಂಡತಿಯ ಆರೋಪ 'ಸುಳ್ಳು' ಎಂದು ಪರಿಗಣಿಸಿ ವಿಚ್ಛೇದನವನ್ನು ಅನುಮೋದಿಸಿದೆ.
ಕೃಪೆ: economictimes