‘ಒಂದು ದೇಶ, ಒಂದು ಚುನಾವಣೆ’ ಕುರಿತು ಮುಕ್ತ ಚರ್ಚೆಗೆ ಉಮರ್ ಅಬ್ದುಲ್ಲಾ ಕರೆ
ಉಮರ್ ಅಬ್ದುಲ್ಲಾ |PC : PTI
ಜಮ್ಮು : ‘ಒಂದು ದೇಶ,ಒಂದು ಚುನಾವಣೆ’ ಕುರಿತು ಶುಕ್ರವಾರ ಮಾತನಾಡಿದ ಜಮ್ಮುಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು, ಸಂವಿಧಾನದ 370ನೇ ವಿಧಿಯೊಂದಿಗೆ ಸಂಭವಿಸಿದ್ದು ಇದರೊಂದಿಗೂ ನಡೆಯಬಾರದು ಎಂದು ಹೇಳಿದರು.
ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಬ್ದುಲ್ಲಾ, ‘ಒಂದು ದೇಶ,ಒಂದು ಚುನಾವಣೆ’ ಪ್ರಸ್ತಾವವಿನ್ನೂ ಸಂಸತ್ತಿನ ಮುಂದೆ ಬಂದಿಲ್ಲ. ಅದರ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತದೆ. ಚರ್ಚೆಯು ಮುಕ್ತವಾಗಿರಬೇಕು. ಅದು 370ನೇ ವಿಧಿಯೊಂದಿಗೆ ಸಂಭವಿಸಿದ್ದಂತೆ ಇರಬಾರದು. ಅದನ್ನು ಮುಕ್ತವಾಗಿ ಚರ್ಚಿಸಬೇಕು. ನ್ಯಾಷನಲ್ ಕಾನ್ಫರೆನ್ಸ್ ಸಂಬಂಧಿಸಿದಂತೆ, ನಾವು ಒಂದಾಗಿ ಕುಳಿತು ಅದರ ಬಗ್ಗೆ ಅಭಿಪ್ರಾಯವನ್ನು ರೂಪಿಸುತ್ತೇವೆ ಮತ್ತು ಹೇಗೆ ಮತ ಚಲಾಯಿಸಬೇಕು ಎಂದು ನಮ್ಮ ಸಂಸದರಿಗೆ ಸೂಚಿಸುತ್ತೇವೆʼ ಎಂದು ಹೇಳಿದರು.
ಈ ನಡುವೆ, ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಜೆಎಂಎಂ ಸಂಸದೆ ಮಹುವಾ ಮಜಿ ಅವರು, ಬಿಜೆಪಿಯ ಚುನಾವಣಾ ಪ್ರಕರಣಗಳಲ್ಲಿ ಧರ್ಮ ಮತ್ತು ಜಾತಿಯನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ,ಹೀಗಾಗಿಯೇ ಅದು ‘ಒಂದು ದೇಶ,ಒಂದು ಚುನಾವಣೆ’ಯನ್ನು ಜಾರಿಗೊಳಿಸಲು ಬಯಸಿದೆ. ಜಾರ್ಖಂಡ್ ವಿಧಾನಭಾ ಚುನಾವಣೆಗಳಲ್ಲಿಯೂ ಅದು ಧರ್ಮ ಮತ್ತು ಜಾತಿಯನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಸ್ಪರ್ಧಿಸಿತ್ತು. ಆದರೆ ಹೀನಾಯ ಸೋಲನ್ನು ಅನುಭವಿಸಿತು. ‘ಒಂದು ದೇಶ,ಒಂದು ಚುನಾವಣೆ’ಯ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳ ಕುರಿತು ಕೆಲಸ ಮಾಡಲು ಕೇಂದ್ರ ಸರಕಾರಕ್ಕೆ ಎಂದಿಗೂ ಸಾಧ್ಯವಿಲ್ಲ. ‘ಒಂದು ದೇಶ,ಒಂದು ಚುನಾವಣೆ’ಯು ಪ್ರಾದೇಶಿಕ ಪಕ್ಷಗಳಿಗೆ ಹಾನಿಯನ್ನುಂಟು ಮಾಡಲು ಷಡ್ಯಂತ್ರದ ಭಾಗವಾಗಿದೆ ಎಂದು ಹೇಳಿದರು.
ರಾಜ್ಯ ವಿಧಾನಸಭೆಗಳ ಅಧಿಕಾರಾವಧಿ ಅಕಾಲಿಕವಾಗಿ ಅಂತ್ಯಗೊಳ್ಳುವುದರಿಂದ ಇದು ಕಾರ್ಯಸಾಧ್ಯ ನಿರ್ಧಾರವೆಂದು ತಾನು ಭಾವಿಸಿಲ್ಲ ಎಂದ ದಿಲ್ಲಿಯ ಮಾಜಿ ಲೆಫ್ಟಿನಂಟ್ ಗವರ್ನರ್ ನಜೀಬ್ ಜಂಗ್ ಅವರು,ಅದರ ಮೇಲೆ ಯಾವುದೇ ಸಾಂವಿಧಾನಿಕ ನಿರ್ಬಂಧವಿಲ್ಲ. ನೀವು ಅದನ್ನು ಪ್ರಯತ್ನಿಸಬಹುದು,ಆದರೆ ಅದು ಸಂಪೂರ್ಣವಾಗಿ ಅಪ್ರಾಯೋಗಿಕವಾಗಿದೆ. ಅದು ಆಗುವಂಥದ್ದಲ್ಲ ಎಂದು ಹೇಳಿದರು.