ನಾಗ್ಪುರ ಹಿಂಸಾಚಾರಕ್ಕೆ ಕುಮ್ಮಕ್ಕು ಆರೋಪ ; ಹಮೀದ್ ಇಂಜಿನಿಯರ್ ಬಂಧನ
ಮುಸ್ಲಿಮರ ಸಮಸ್ಯೆಗಳ ಕುರಿತು ಮೋದಿಯವರನ್ನು ಭೇಟಿಯಾಗಿ ಸುದ್ದಿಯಾಗಿದ್ದ ಎಂಡಿಪಿ ಸಂಸ್ಥಾಪಕ

ಮುಹಮ್ಮದ್ ಹಮೀದ್ ಇಂಜಿನಿಯರ್ | PC : jansatta.com
ನಾಗ್ಪುರ: ಮುಸ್ಲಿಮರ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸುದ್ದಿ ಮಾಡಿದ್ದ ಮುಹಮ್ಮದ್ ಹಮೀದ್ ಇಂಜಿನಿಯರ್ ಅವರನ್ನು ಈಗ ನಾಗ್ಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಮೈನಾರಿಟೀಸ್ ಡೆಮಾಕ್ರಟಿಕ್ ಪಾರ್ಟಿ(ಎಂಡಿಪಿ)ಯ ಸಂಸ್ಥಾಪಕರಾಗಿರುವ ಇಂಜಿನಿಯರ್ ಅವರ ವೃತ್ತಿ ಜೀವನವು ಹಲವಾರು ನಾಟಕೀಯ ತಿರುವುಗಳನ್ನು ಕಂಡಿದೆ. ಸರಕಾರಿ ಉದ್ಯೋಗಿಯಾಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದ ಇಂಜಿನಿಯರ್ 2002ರಲ್ಲಿ ನಾಗ್ಪುರದಲ್ಲಿಯ ಮಸೀದಿಯೊಂದರ ಮೇಲೆ ನಿಯಂತ್ರಣಕ್ಕಾಗಿ ಆಂದೋಲನವನ್ನು ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. ಆಂದೋಲನವು ಎದುರಾಳಿ ಮುಸ್ಲಿಮ್ ಪಂಗಡಗಳೊಂದಿಗೆ ಘರ್ಷಣೆಗಳಿಗೂ ಸಾಕ್ಷಿಯಾಗಿತ್ತು. ಅಂದಿನಿಂದ ಅವರ ಪ್ರಭಾವವು ಇನ್ನಷ್ಟು ವಿಸ್ತರಿಸಿದೆ.
ಶುಕ್ರವಾರ ನಾಗ್ಪುರ ಪೋಲಿಸರು ಇಂಜಿನಿಯರ್ ಅವರನ್ನು ಬಂಧಿಸುವ ಮೂಲಕ ಅವರ ವೃತ್ತಿಜೀವನವು ತೀಕ್ಷ್ಣ ಮತ್ತು ವಿವಾದಾತ್ಮಕ ತಿರುವನ್ನು ಪಡೆದುಕೊಂಡಿದೆ. ಇತ್ತೀಚಿಗೆ ಬಲಪಂಥೀಯ ಸಂಘಟನೆಗಳು ಮುಘಲ್ ದೊರೆ ಔರಂಗಜೇಬ್ ಗೋರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿದ ಬಳಿಕ ನಗರದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರವನ್ನು ಇಂಜಿನಿಯರ್ ಪ್ರಚೋದಿಸಿದ್ದರು ಎಂದು ಪೋಲಿಸರು ಆರೋಪಿಸಿದ್ದಾರೆ.
ಸುಮಾರು 65ರ ಹರೆಯದ ನಾಗ್ಪುರದ ನಿವಾಸಿಯಾಗಿರುವ ಮುಹಮ್ಮದ್ ಹಮೀದ್ ಮಹಾರಾಷ್ಟ್ರ ಸರಕಾರದ ಪಿಡಬ್ಲ್ಯುಡಿಯಲ್ಲಿ ಇಂಜಿನಿಯರ್ ಆಗಿ ತನ್ನ ವೃತ್ತಿಜೀವನವನ್ನು ಆರಂಭಿಸಿದ್ದರು. ಆಗಿನಿಂದ ಇಂಜಿನಿಯರ್ ಎಂಬ ಉಪನಾಮ ಅವರ ಹೆಸರಿನೊಂದಿಗೆ ಸೇರಿಕೊಂಡಿದೆ. ಸಾಂಪ್ರದಾಯಿಕ ಸುನ್ನಿ ಮತ್ತು ಸೂಫಿ ಪದ್ಧತಿಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಮುಖ್ಯವಾಹಿನಿಯ ಅಹ್ಲೆ ಸುನ್ನತ್ ಜಮಾಅತ್ ನ ಅನುಯಾಯಿಯಾಗಿರುವ ಇಂಜಿನಿಯರ್ 2002ರಲ್ಲಿ ಸಮುದಾಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ತಬ್ಲಿಗಿ ಜಮಾಅತ್ ನ ವಶದಲ್ಲಿದ್ದ ನಾಗ್ಪುರದ ಸುನ್ನಿ ಮಸೀದಿಯ ಮೇಲೆ ನಿಯಂತ್ರಣವನ್ನು ಮರುಸಾಧಿಸಲು ಆಂದೋಲನವನ್ನು ಮುನ್ನಡೆಸಿದ ಬಳಿಕ ಅವರ ಪ್ರಭಾವವು ಇನ್ನಷ್ಟು ಹೆಚ್ಚಾಗಿತ್ತು.
‘2002ರಲ್ಲಿ ನಾಗ್ಪುರದ ಮೋಮಿನ್ ಪುರದಲ್ಲಿಯ ಸುನ್ನಿ ಮಸೀದಿಯ ನಿಯಂತ್ರಣವನ್ನು ತಬ್ಲಿಗಿ ಜಮಾಅತ್ ವಶಪಡಿಸಿಕೊಂಡಿತ್ತು. ಮಸೀದಿಯ ಮೇಲೆ ಅಹ್ಲೆ ಸುನ್ನತ್ ಜಮಾಅತ್ ನಿಯಂತ್ರಣವನ್ನು ಮರುಸ್ಥಾಪಿಸಲು ನಾವು ಹೋರಾಡಿದ್ದೆವು. ಆದರೆ ಆಡಳಿತವು ಹೆಚ್ಚಾಗಿ ರಾಜಕೀಯ ಪ್ರಭಾವ ಹೊಂದಿರುವವರಿಗೆ ಮಣೆ ಹಾಕುತ್ತದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೆವು ಮತ್ತು ಇದು ಇಮಾನ್ ತಂಝಿಮ್ ಸೃಷ್ಟಿಗೆ ಕಾರಣವಾಗಿತ್ತು’ ಎಂದು ಇಂಜಿನಿಯರ್ ತನ್ನ ಭಾಷಣವೊಂದರಲ್ಲಿ ಹೇಳಿದ್ದರು.
2002ರಲ್ಲಿ ಇಂಜಿನಿಯರ್ ಭಾರತದಲ್ಲಿ ಬರೇಲ್ವಿ ಸುನ್ನಿ ಪದ್ಧತಿಗಳು ಮತ್ತು ಅದರ ಅನನ್ಯತೆಯನ್ನು ಸಂರಕ್ಷಿಸುವ ಗುರಿಯೊಂದಿಗೆ ಇಮಾನ್ ತಂಝಿಮ್ ಅನ್ನು ಸ್ಥಾಪಿಸಿದ್ದರು. ಅದು ಸುನ್ನಿ ಸುಧಾರಣಾ ಆಂದೋಲನವಾದ ಬರೇಲ್ವಿ ಚಿಂತನ ಶಾಲೆಯನ್ನು ಅನುಸರಿಸುತ್ತದೆ. ಚಿಂತನ ಶಾಲೆಯನ್ನು 19ನೇ ಶತಮಾನದಲ್ಲಿ ಅಹ್ಮದ್ ರಝಾ ಖಾನ್ ಅವರು ತನ್ನ ಹುಟ್ಟೂರಾದ ಬರೇಲಿಯಲ್ಲಿ ಸ್ಥಾಪಿಸಿದ್ದರು. ಬರೇಲ್ವಿ ಆಂದೋಲನವು ಪ್ರವಾದಿ ಮತ್ತು ಸೂಫಿಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ.
ಬರೇಲ್ವಿ ಚಿಂತನ ಶಾಲೆಯು ಭಾರತದಲ್ಲಿಯ ಬಹುತೇಕ ಮುಸ್ಲಿಮರನ್ನು ಪ್ರತಿನಿಧಿಸುತ್ತದೆಯಾದರೂ ಸುನ್ನಿ ಇಸ್ಲಾಮಿನ ದೇವಬಂದಿ ಪಂಗಡಗಳಷ್ಟು ರಾಜಕೀಯ ಪ್ರಾಮುಖ್ಯವನ್ನು ಅದು ಹೊಂದಿಲ್ಲ. ಹೀಗಾಗಿ ಇಂಜಿನಿಯರ್ 2009ರಲ್ಲಿ ಎಂಡಿಪಿಯನ್ನು ಸ್ಥಾಪಿಸಿದ್ದರು. ಆಗಿನಿಂದ ಎಂಡಿಪಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿದೆಯಾದರೂ ಗಮನಾರ್ಹ ರಾಜಕೀಯ ಪ್ರಭಾವವನ್ನು ಬೀರುವಲ್ಲಿ ವಿಫಲಗೊಂಡಿದೆ.
ಮಾ.19ರಂದು ಎಂಡಿಪಿ ಪದಾಧಿಕಾರಿ ಫಾಹಿಮ್ ಖಾನ್ರನ್ನು ನಾಗ್ಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೋಲಿಸರು ಬಂಧಿಸಿದ್ದರು. ಅವರನ್ನು ಸಮರ್ಥಿಸಿಕೊಂಡು ಇಂಜಿನಿಯರ್ ಹಲವಾರು ಸುದ್ದಿಗೋಷ್ಠಿಗಳನ್ನು ನಡೆಸಿದ್ದರು. ಆದರೆ ಅಂತಿಮವಾಗಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದಲ್ಲಿ ಖುದ್ದು ಬಂಧಿಸಲ್ಪಟ್ಟಿದ್ದಾರೆ.