‘ಒಂದು ದೇಶ, ಒಂದು ಚುನಾವಣೆ’ ಮಸೂದೆ | ಜೆಪಿಸಿಗೆ ಪ್ರಿಯಾಂಕಾ ಗಾಂಧಿಯನ್ನು ನಾಮ ನಿರ್ದೇಶಿಸಲಿರುವ ಕಾಂಗ್ರೆಸ್
ಪ್ರಿಯಾಂಕಾ ಗಾಂಧಿ | PC : PTI
ಹೊಸದಿಲ್ಲಿ : ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾದ ‘ಒಂದು ದೇಶ, ಒಂದು ಚುನಾವಣೆ’ ಮಸೂದೆಯನ್ನು ಪರಿಶೀಲಿಸುವ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ ಶಿಫಾರಸು ಮಾಡಲಿದೆ.
ಸರಕಾರ ಮಸೂದೆಯನ್ನು ಮಂಡಿಸಿದ ಬಳಿಕ ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಿದ್ದರೂ ಸ್ವೀಕರ್ ಓಂ ಬಿರ್ಲಾ ಅವರು ಅದನ್ನು ಇನ್ನೂ ಅಂತಿಮಗೊಳಿಸಿಲ್ಲ. ಡಿಸೆಂಬರ್ 30ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವ ಮುನ್ನ ಸಮಿತಿಯನ್ನು ಅಂತಿಮಗೊಳಿಸಲು ಸರಕಾರ ಚಿಂತಿಸುತ್ತಿದೆ.
ಪ್ರಿಯಾಂಕಾ ಗಾಂಧಿ ಅವರಲ್ಲದೆ, ಮನೀಶ್ ತಿವಾರಿ, ರಾಜ್ಯ ಸಭಾ ಸದಸ್ಯ ಸುಖ್ದೇವ್ ಭಗತ್ ಹಾಗೂ ರಣದೀಪ್ ಸುರ್ಜೇವಾಲ ಅವರನ್ನು ಕೂಡ ಕಾಂಗ್ರೆಸ್ ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಲಿದೆ.
ಈ ಸಮಿತಿ ಲೋಕಸಭೆಯ 21 ಸದಸ್ಯರು ಹಾಗೂ ರಾಜ್ಯ ಸಭೆಯ 10 ಸದಸ್ಯರನ್ನು ಒಳಗೊಂಡಿರಲಿದೆ.
ಜಂಟಿ ಸಂಸದೀಯ ಸಮಿತಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಲ್ಯಾಣ್ ಬ್ಯಾನರ್ಜಿಯನ್ನು ನಾಮ ನಿರ್ದೇಶಿಸಲಿದೆ. ಡಿಎಂಕೆಯಿಂದ ಪಿ. ವಿಲ್ಸನ್ ಹಾಗೂ ಸಮಾಜವಾದಿ ಪಕ್ಷ (ಎಸ್ಪಿ)ದಿಂದ ಧರ್ಮೇಂದ್ರ ಯಾದವ್ ಕೂಡ ಸಮಿತಿಯ ಭಾಗವಾಗಲಿದ್ದಾರೆ.
ಸಂವಿಧಾನ (129ನೇ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ಮೇಘಾವಲ್ ಅವರು ಸುಮಾರು 90 ನಿಮಿಷಗಳ ಚರ್ಚೆಯ ಬಳಿಕ ಮಂಡಿಸಿದ್ದರು. ಅನಂತರ ಮತಗಳನ್ನು ವಿಭಾಗಿಸಲಾಯಿತು. 269ಕ್ಕೂ ಅಧಿಕ ಸದಸ್ಯರು ಮಸೂದೆ ಪರವಾಗಿ ಹಾಗೂ 198 ಸದಸ್ಯರು ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದರು.