‘ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆ: ವಿಪ್ ಹೊರತಾಗಿಯೂ ಗೈರಾಗಿದ್ದ ನಿತಿನ್ ಗಡ್ಕರಿ, ಜ್ಯೋತಿರಾದಿತ್ಯ ಸಿಂಧಿಯಾ
ವಿವರಣೆ ಕೋರಿ ನೋಟಿಸ್ ಜಾರಿಗೊಳಿಸಿದ ಬಿಜೆಪಿ
ಹೊಸದಿಲ್ಲಿ: ‘ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆಗಗಿನ ಮತದಾನದ ವೇಳೆ ಪಕ್ಷದ ವಿಪ್ ಹೊರತಾಗಿಯೂ ಲೋಕಸಭೆಗೆ ಗೈರಾಗಿದ್ದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಒಟ್ಟು 20 ಮಂದಿ ಪಕ್ಷದ ಸಂಸದರಿಗೆ ವಿವರಣೆ ಕೋರಿ ಬಿಜೆಪಿ ನೋಟಿಸ್ ಜಾರಿಗೊಳಿಸಿದೆ.
ಮಂಗಳವಾರ ಲೋಕಸಭೆಯಲ್ಲಿ ‘ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆಗಾಗಿ ನಡೆದ ಮತದಾನದ ವೇಳೆ ಆಡಳಿತಾರೂಢ ಬಿಜೆಪಿಯ 20 ಸಂಸದರು ಸದನಕ್ಕೆ ಗೈರಾಗಿದ್ದುದರಿಂದ, ಬಿಜೆಪಿ ಮುಜುಗರಕ್ಕೀಡಾಯಿತು. ‘ಒಂದು ದೇಶ ಒಂದು ಚುನಾವಣೆ’ ಮಸೂದೆಗೆ ಆಡಳಿತಾರೂಢ ಬಿಜೆಪಿಯಲ್ಲೇ ಸಹಮತವಿಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗೆ ಈ ನಡೆ ಗುರಿಯಾಯಿತು. ಹೀಗಾಗಿ, ಲೋಕಸಭೆಗೆ ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ವಿಪ್ ಜಾರಿಗೊಳಿಸಿದ್ದರೂ, ಲೋಕಸಭೆಗೆ ಗೈರಾಗಿದ್ದ ಎಲ್ಲ 20 ಮಂದಿಗೆ ಬಿಜೆಪಿ ನೋಟಿಸ್ ಜಾರಿಗೊಳಿಸಿದೆ.
ಈ ಪೈಕಿ ಕೇಂದ್ರ ಸಚಿವರಾದ ಸಿ.ಆರ್.ಪಾಟೀಲ್ ಹಾಗೂ ಭಗೀರಥ್ ಚೌಧರಿ ರಾಜಸ್ಥಾನ ಸರಕಾರಕ್ಕೆ ಒಂದು ವರ್ಷ ತುಂಬಿದ ಅಂಗವಾಗಿ ಮಂಗಳವಾರ ಜೈಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಏಕ್ ವರ್ಷ್-ಪರಿಣಾಮ್ ಉತ್ಕರ್ಷ್’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದರಿಂದ, ಈ ಕುರಿತು ಅವರಿಬ್ಬರೂ ಪಕ್ಷದ ಉನ್ನತ ನಾಯಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು. ಆದರೆ, ಉಳಿದ ಸಂಸದರು ಯಾವುದೇ ಪೂರ್ವಸೂಚನೆ ನೀಡದೆ ಲೋಕಸಭೆಗೆ ಗೈರಾಗಿದ್ದುದರಿಂದ, ಆಡಳಿತಾರೂಢ ಬಿಜೆಪಿ ತೀವ್ರ ಮುಜಗರಕ್ಕೀಡಾಗಿತ್ತು.