ದೇವಸ್ಥಾನದ ಪ್ರಸಾದ ಸೇವಿಸಿ ಒಬ್ಬ ಮೃತ್ಯು, 80 ಮಂದಿ ಅಸ್ವಸ್ಥ
ಸಾಂದರ್ಭಿಕ ಚಿತ್ರ Photo: freepik
ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಎಂಬಲ್ಲಿನ ಮಜ್ರಿ ಕಾಳಿ ಮಾತಾ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಸಂದರ್ಭದಲ್ಲಿ ಪ್ರಸಾದ ಸೇವಿಸಿ ಒಬ್ಬ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಶನಿವಾರ ನಡೆದಿದೆ. ಈ ಪೈಕಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸಾದ ಸ್ವೀಕರಿಸಿದವರ ಪೈಕಿ ಬೂಂದಿ ಸೇವಿಸಿದ್ದವರಲ್ಲಿ ಮಾತ್ರ ವಾಂತಿ ಬೇಧಿಯಂಥ ವಿಷಪ್ರಾಶನದಿಂದಾದ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಅಸ್ವಸ್ಥಗೊಂಡವರಲ್ಲಿ 30 ಮಂದಿ ಮಹಿಳೆಯರು ಹಾಗೂ 24 ಮಕ್ಕಳು ಸೇರಿದ್ದಾರೆ. ಎಲ್ಲರನ್ನೂ ಮಜ್ರಿಯ ಡಬ್ಲ್ಯುಸಿಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವರೋರಾ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿರುವ ಆರು ಮಂದಿಯನ್ನು ಚಂದ್ರಾಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿಯನ್ನು ಗುರುಫೆನ್ ಯಾದವ್ (80) ಎಂದು ಗುರುತಿಸಲಾಗಿದ್ದು, ಇವರಿಗೆ ಇತರ ಸಹ ಅಸ್ವಸ್ಥತೆಗಳೂ ಇದ್ದವು ಎಂದು ವೈದ್ಯರು ಹೇಳಿದ್ದಾರೆ. 24 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.