ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ (PTI)
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲಿ ಓರ್ವ ಅಪ್ರಾಪ್ತ ಬಾಲಕ ಮೃತ ಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೋಮವಾರ ಪೊಲೀಸ್ ವರದಿಗಳು ತಿಳಿಸಿವೆ. ಈ ಸ್ಫೋಟವು ಪಂಡುವಾದಲ್ಲಿನ ಕೆರೆಯೊಂದರ ಬಳಿ ಬಾಲಕರ ಗುಂಪೊಂದು ಆಟವಾಡುತ್ತಿದ್ದಾಗ ನಡೆದಿದೆ ಎಂದು ಹೇಳಲಾಗಿದೆ.
ಈ ಸ್ಫೋಟದಲ್ಲಿ ಓರ್ವ ಬಾಲಕ ಪಂಡುವಾದಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಗಾಯಗೊಂಡಿರುವ ಇನ್ನಿಬ್ಬರನ್ನು ಚಿಕಿತ್ಸೆಗಾಗಿ ಚಿನ್ಸುರಾದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಕುರಿತು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ, ಈ ಸ್ಫೋಟದಲ್ಲಿ ಟಿಎಂಸಿಯ ಪಾತ್ರವಿದೆ ಎಂದು ಆರೋಪಿಸಿದ್ದಾರೆ.
ಪಂಡುವಾದಲ್ಲಿ ಟಿಎಂಸಿಯ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರಚಾರ ನಡೆಸುವುದಕ್ಕೂ ಮುನ್ನ ಭಯವನ್ನು ಹರಡುವುದು ಆಡಳಿತಾರೂಢ ಟಿಎಂಸಿ ಪಕ್ಷದ ಕಾರ್ಯತಂತ್ರವಾಗಿದೆ ಎಂದು ಅವರು ದೂರಿದ್ದಾರೆ.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದಲ್ಲಿ ಎರಡನೆ ಹಂತದ ನಾಯಕರಾಗಿರುವ ಅಭಿಷೇಕ್ ಬ್ಯಾನರ್ಜಿ ಇಂದು ಸಂಜೆ ಪಂಡುವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವವರಿದ್ದಾರೆ.