ಮಣಿಪುರದ ಕಾಂಗ್ಪೋಕ್ಪಿಯಲ್ಲಿ ಗಲಭೆಕೋರರ ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಬಲಿ
ಫೋಟೋ -PTI
ಇಂಫಾಲ್: ಗುರುವಾರ ಬೆಳಗ್ಗೆ ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ಹರಾವೊಥೆಲ್ ಗ್ರಾಮದಲ್ಲಿ ಗಲಭೆಕೋರರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರಿಂದ ಓರ್ವ ವ್ಯಕ್ತಿ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ದೃಢಪಡದ ವರದಿಗಳನ್ನು ಉಲ್ಲೇಖಿಸಿ ಸ್ಥಳೀಯ ಸೇನಾ ಘಟಕ ಟ್ವೀಟ್ ಮಾಡಿದ್ದರೆ, ಘಟನಾ ಸ್ಥಳದಿಂದ ಮೃತದೇಹವೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ಮತ್ತೆ ಕೆಲವರು ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗುಂಡಿನ ಚಕಮಕಿ ಇನ್ನೂ ಮುಂದುವರಿದಿರುವುದರಿಂದ ನೆಲದ ಮೇಲೆ ಬಿದ್ದಿರುವವರು ಮೃತಪಟ್ಟಿದ್ದಾರೋ ಅಥವಾ ಗಾಯಗೊಂಡಿದ್ದಾರೋ ಎಂಬುದು ಈ ತಕ್ಷಣಕ್ಕೆ ದೃಢಪಟ್ಟಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ.
ಈ ಕುರಿತು ವಿವರ ನೀಡಿರುವ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾಪಡೆಯ ಅಧಿಕೃತ ಟ್ವಿಟರ್ ಖಾತೆಯು, ಮುಂಜಾನೆ 5.30ರ ವೇಳೆಗೆ ಸಶಸ್ತ್ರಧಾರಿ ಗಲಭೆಕೋರರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು ಎಂದು ಹೇಳಿದೆ.
"ಪರಿಸ್ಥಿತಿ ಕೈಮೀರುವುದನ್ನು ನಿಯಂತ್ರಿಸಲು ಗಲಭೆಗ್ರಸ್ತ ಪ್ರದೇಶದಲ್ಲಿ ನಿಯೋಜಿಸಲಾಗಿರುವ ನಮ್ಮ ತುಕಡಿಗಳನ್ನು ಕೂಡಲೇ ಕ್ರಿಯಾಶೀಲಗೊಳಿಸಲಾಯಿತು. ಸ್ಥಳಕ್ಕೆ ತಲುಪಿದ ಸೇನಾ ತುಕಡಿಗಳು ಗಲಭೆಕೋರರ ಗುಂಡಿನ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿದವು" ಎಂದು ಸೇನಾಪಡೆಯ ಅಧಿಕೃತ ಟ್ವಿಟರ್ ಖಾತೆಯಾದ "Sಠಿeಚಿಡಿ ಅoಡಿಠಿs"ನಲ್ಲಿ ಹೇಳಲಾಗಿದೆ.
"ಸೇನಾ ತುಕಡಿಗಳು ಉಭಯ ಬಣಗಳಲ್ಲಿ ಆಗುವ ಹಾನಿಯನ್ನು ತಪ್ಪಿಸಲು ಯೋಜಿತವಾಗಿ ಪ್ರತಿಕ್ರಿಯಿಸಿದವು. ಸೇನಾ ತುಕಡಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರಿಂದಾಗಿ ಗುಂಡಿನ ದಾಳಿ ಸ್ಥಗಿತಗೊಂಡಿತು" ಎಂದೂ ಹೇಳಲಾಗಿದೆ.
"ಹೆಚ್ಚುವರಿ ಸೇನಾ ತುಕಡಿಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಕೆಲವರು ಗಾಯಾಳುಗಳಾಗಿದ್ದಾರೆ ಎಂದು ದೃಢಪಡದ ವರದಿಗಳು ಸೂಚಿಸುತ್ತಿವೆ. ಘಟನಾ ಸ್ಥಳದಲ್ಲಿ ದೊಡ್ಡ ಪ್ರಮಾಣದ ಜನಜಂಗುಳಿ ಸೇರಿದೆ ಎಂಬ ವರದಿಗಳೂ ಇವೆ. ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಳನ್ನು ಮುಂದೆ ಹಂಚಿಕೊಳ್ಳುತ್ತೇವೆ" ಎಂದು ತಿಳಿಸಿದೆ.
ಘಟನಾ ಸ್ಥಳವು ರಾಜ್ಯ ರಾಜಧಾನಿಯಾದ ಇಂಫಾಲದಿಂದ ಸುಮಾರು 20 ಕಿಮೀ ದೂರದಲ್ಲಿದೆ.
ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಈವರೆಗೆ ನಡೆದಿರುವ ಮೇಯ್ಟಿ ಹಾಗೂ ಕುಕಿ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ತಮಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂದು ಮೇಯ್ಟಿ ಸಮುದಾಯ ಆಗ್ರಹವನ್ನು ವಿರೋಧಿಸಿ ಗಿರಿ ಪ್ರದೇಶದ ಜಿಲ್ಲೆಗಳಲ್ಲಿ ಸಂಘಟಿಸಲಾಗಿದ್ದ "ಬುಡಕಟ್ಟು ಐಕ್ಯತಾ ಜಾಥಾ"ದ ನಂತರ ಮೇ 3ರಂದು ಮೊದಲ ಬಾರಿಗೆ ಉಭಯ ಸಮುದಾಯಗಳ ನಡುವೆ ಸಂಘರ್ಷ ಸ್ಫೋಟಗೊಂಡಿತ್ತು.
ಮಣಿಪುರದ ಜನಸಂಖ್ಯೆಯಲ್ಲಿ ಶೇ. 53ರಷ್ಟು ಪ್ರಮಾಣದಲ್ಲಿರುವ ಮೇಯ್ಟಿ ಸಮುದಾಯವು ಬಹುತೇಕ ಇಂಫಾಲ್ ಕಣಿವೆ ಪ್ರದೇಶದಲ್ಲಿ ನೆಲೆಸಿದ್ದರೆ, ರಾಜ್ಯದ ಜನಸಂಖ್ಯೆಯಲ್ಲಿ ಶೇ. 40ರಷ್ಟಿರುವ ನಾಗಾ ಹಾಗೂ ಕುಕಿ ಸಮುದಾಯಗಳು ಗಿರಿ ಪ್ರದೇಶದ ಜಿಲ್ಲೆಗಳಲ್ಲಿ ವಾಸಿಸುತ್ತಿವೆ.