‘ಒಂದು ದೇಶ ಒಂದು ಚುನಾವಣೆ’ ಜಾರಿಗಾಗಿ ಮೂರು ಮಸೂದೆಗಳ ಮಂಡನೆಗೆ ಸರಕಾರ ಸಜ್ಜು
PC : X
ಹೊಸದಿಲ್ಲಿ : ‘ಒಂದು ದೇಶ ಒಂದು ಚುನಾವಣೆ’ಯ ಅನುಷ್ಠಾನವನ್ನು ಸುಗಮಗೊಳಿಸಲು ಕೇಂದ್ರ ಸರಕಾರವು ಸಂಸತ್ತಿನ ಚಳಿಗಾಲದ ಅಥವಾ ಬಜೆಟ್ ಅಧಿವೇಶನದಲ್ಲಿ ಮೂರು ಮಸೂದೆಗಳನ್ನು ಮಂಡಿಸುವ ಸಾಧ್ಯತೆಯಿದೆ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ ‘ಒಂದು ದೇಶ ಒಂದು ಚುನಾವಣೆ ’ಪ್ರಸ್ತಾವಕ್ಕೆ ಕೇಂದ್ರ ಸಂಪುಟವು ಕಳೆದ ವಾರ ಅನುಮೋದನೆ ನೀಡಿತ್ತು.
ಈ ಪೈಕಿ ಎರಡು ಮಸೂದೆಗಳು ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಹಂತಹಂತವಾಗಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಸರಕಾರದ ಯೋಜನೆಯನ್ನು ಜಾರಿಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿಗಳನ್ನು ಒಳಗೊಂಡಿವೆ.
ಕೋವಿಂದ್ ಸಮಿತಿಯು ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಿಕ ಚುನಾವಣೆಗಳು ಮತ್ತು ಸಾರ್ವತ್ರಿಕ ಚುನಾವಣೆ ನಡೆದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ಪ್ರಸ್ತಾವಿಸಿದೆ. ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳ ಮೂಲಕ ಸಂವಿಧಾನಕ್ಕೆ 15 ತಿದ್ದುಪಡಿಗಳನ್ನು ತರಲು ಅದು ಶಿಫಾರಸು ಮಾಡಿದೆ. ಕೋವಿಂದ್ ಸಮಿತಿಯ ಪ್ರಸ್ತಾವಗಳನ್ನು 2029ರಿಂದ ಕಾರ್ಯಗತಗೊಳಿಸಲು ಸರಕಾರವು ನಿರ್ಧರಿಸಿದರೆ 17 ರಾಜ್ಯಗಳು ಮೂರು ವರ್ಷಗಳಿಗಿಂತ ಕಡಿಮೆ ವಿಧಾನಸಭಾ ಅಧಿಕಾರಾವಧಿಯನ್ನು ಹೊಂದಿರಲಿವೆ.
ಸಮಿತಿಯು ಸಂವಿಧಾನದ ಮೂರು ವಿಧಿಗಳಿಗೆ ತಿದ್ದುಪಡಿಗಳು, ಅಸ್ತಿತ್ವದಲ್ಲಿರುವ ವಿಧಿಗಳಿಗೆ 12 ಹೊಸ ಉಪಕಲಮ್ಗಳ ಸೇರ್ಪಡೆ ಹಾಗೂ ವಿಧಾನಸಭೆಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಮೂರು ಕಾನೂನುಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾವಿಸಿದೆ. ಒಟ್ಟು 18 ತಿದ್ದುಪಡಿಗಳು ಮತ್ತು ಹೊಸ ಸೇರ್ಪಡೆಗಳನ್ನು ಸಮಿತಿಯು ಸೂಚಿಸಿದೆ.
ಸಂವಿಧಾನ ತಿದ್ದುಪಡಿ ಮಸೂದೆಗಳ ಅಂಗೀಕಾರಕ್ಕಾಗಿ ಸದನದ ಕನಿಷ್ಠ ಮೂರನೇ ಎರಡರಷ್ಟು ವಿಶೇಷ ಬಹುಮತದ ಅಗತ್ಯವಿದೆ ಎನ್ನುವುದನ್ನು ತಜ್ಞರು ಬೆಟ್ಟು ಮಾಡಿದ್ದಾರೆ. ಸರಕಾರಕ್ಕೆ 362 ಸದಸ್ಯರ ಬೆಂಬಲದ ಅಗತ್ಯವಿದ್ದು, ಎನ್ಡಿಎ ಸದನದಲ್ಲಿ ಕೇವಲ 292 ಸದಸ್ಯರನ್ನು ಹೊಂದಿದೆ. ಹೆಚ್ಚಿನ ಪ್ರತಿಪಕ್ಷಗಳು ಮತ್ತು ಬಿಜೆಡಿಯಂತಹ ‘ತಟಸ್ಥ’ ಪಕ್ಷಗಳು ಮಸೂದೆಯನ್ನು ವಿರೋಧಿಸಿರುವುದರಿಂದ ಸರಕಾರದ ಮುಂದಿನ ದಾರಿ ಕಠಿಣವಾಗಿದೆ.
► ಮೊದಲ ತಿದ್ದುಪಡಿ ಮಸೂದೆ
ಸಂವಿಧಾನದ 82ಎ ವಿಧಿಗೆ ಉಪಕಲಂ(1)ನ್ನು ಸೇರಿಸುವುದನ್ನು ಈ ಉದ್ದೇಶಿತ ಮಸೂದೆಯು ಒಳಗೊಂಡಿದೆ. ಉಪಕಲಂ (1) ಯೋಜನೆ ಯಾವಾಗಿನಿಂದ ಜಾರಿಗೆ ಬಂದಿದೆ ಎನ್ನುವುದನ್ನು ವಿವರಿಸುತ್ತದೆ. ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಅವಧಿಯ ಅಂತ್ಯಕ್ಕೆ ಸಂಬಂಧಿಸಿದ ಉಪಕಲಂ (2)ನ್ನೂ 82ಎ ವಿಧಿಗೆ ಸೇರಿಸಲು ಮಸೂದೆಯು ಉದ್ದೇಶಿಸಿದೆ.
ಸಂವಿಧಾನದ 83(2) ವಿಧಿಗೆ ತಿದ್ದುಪಡಿಯನ್ನು ತರಲು ಮತ್ತು ಲೋಕಸಭೆಯ ಅವಧಿ ಮತ್ತು ವಿಸರ್ಜನೆಗೆ ಸಂಬಂಧಿಸಿದ ಹೊಸ (3) ಮತ್ತು (4) ಉಪಕಲಮ್ಗಳನ್ನು ಸೇರಿಸಲೂ ಮಸೂದೆಯು ಉದ್ದೇಶಿಸಿದೆ. ವಿಧಾನಸಭೆಗಳ ವಿಸರ್ಜನೆಗೆ ಸಂಬಂಧಿಸಿದ ನಿಬಂಧನೆಗಳನ್ನೂ ಈ ಮಸೂದೆಯು ಒಳಗೊಂಡಿದ್ದು, ‘ಏಕಕಾಲಿಕ ಚುನಾವಣೆಗಳು’ ಪದವನ್ನು ಸೇರಿಸಲು 327ನೇ ವಿಧಿಯನ್ನು ತಿದ್ದುಪಡಿಗೊಳಿಸುತ್ತದೆ. ಈ ಮಸೂದೆಯ ಅಂಗೀಕಾರಕ್ಕೆ ಕನಿಷ್ಠ ಶೇ.50ರಷ್ಟು ರಾಜ್ಯಗಳ ಒಪ್ಪಿಗೆಯ ಅಗತ್ಯವಿಲ್ಲ ಎಂದು ಕೋವಿಂದ್ ಸಮಿತಿ ತನ್ನ ಶಿಫಾರಸಿನಲ್ಲಿ ಹೇಳಿದೆ.
►ಎರಡನೇ ತಿದ್ದುಪಡಿ ಮಸೂದೆ
ಉದ್ದೇಶಿತ ಸಂವಿಧಾನ ತಿದ್ದುಪಡಿ ಮಸೂದೆಯು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳೊಂದಿಗೆ ಸಮೀಕರಿಸಲು ಉದ್ದೇಶಿಸಿರುವುದರಿಂದ ಕನಿಷ್ಠ ಶೇ.50 ರಾಜ್ಯಗಳ ಒಪ್ಪಿಗೆ ಅಗತ್ಯವಾಗಿದೆ.
ಮಸೂದೆಯು ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಮತದಾರರ ಪಟ್ಟಿಯ ಸಿದ್ಧತೆಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳನ್ನು ತಿದ್ದುಪಡಿಗೊಳಿಸಲು ಬಯಸಿದೆ.
ಎರಡನೇ ಮಸೂದೆಯು ಹೊಸದಾಗಿ 324ಎ ವಿಧಿಯನ್ನು ಸೇರಿಸುವ ಮೂಲಕ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳೊಂದಿಗೆ ಮುನ್ಸಿಪಾಲ್ಟಿಗಳು ಮತ್ತು ಪಂಚಾಯತ್ಗಳಿಗೆ ಏಕಕಾಲಕ ಚುನಾವಣೆಗಳನ್ನು ನಡೆಸಲು ಅವಕಾಶವನ್ನು ಒದಗಿಸಲಿದೆ.
►ಮೂರನೇ ತಿದ್ದುಪಡಿ ಮಸೂದೆ
ಇದು ಸಾಮಾನ್ಯತಿದ್ದುಪಡಿಯಾಗಿದ್ದು ವಿಧಾನಸಭೆಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ,ದಿಲ್ಲಿ ಮತ್ತು ಜಮ್ಮುಕಾಶ್ಮೀರದ ಶಾಸನ ಸಭೆಗಳ ಅವಧಿಗಳನ್ನು ಲೋಕಸಭೆ ಮತ್ತು ಇತರ ವಿಧಾನಸಭೆಗಳ ಅವಧಿಗೆ ಅನುಗುಣವಾಗಿಸಲು ಸಂಬಂಧಿಸಿದ ಮೂರು ಕಾನೂನುಗಳ ನಿಬಂಧನೆಗಳಲ್ಲಿ ತಿದ್ದುಪಡಿಗಳನ್ನು ತರುವ ಉದ್ದೇಶವನ್ನು ಹೊಂದಿದೆ.