‘ಒಂದು ದೇಶ, ಒಂದು ಚುನಾವಣೆ’ ಅಭಿಯಾನದ ಹಿಂದೆ ಐದು ರಾಜ್ಯಗಳ ಚುನಾವಣೆ ಮುಂದೂಡುವ ದುರುದ್ದೇಶವಿದೆ: ಪ್ರಶಾಂತ್ ಭೂಷಣ್
ಪ್ರಶಾಂತ್ ಭೂಷಣ್ (PTI)
ಭುವನೇಶ್ವರ: ಮುಂಬರುವ ಐದು ರಾಜ್ಯಗಳ ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಒಂದು ದೇಶ, ಒಂದು ಚುನಾವಣೆ’ ಅಭಿಯಾನವನ್ನು ನಡೆಸುತ್ತಿದೆ ಎಂದು ಖ್ಯಾತ ಸುಪ್ರೀಂ ಕೋರ್ಟ್ ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಈ ವರ್ಷದ ನಂತರ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಿಗೆ ವಿಧಾನಸಭಾ ಚುನಾವಣೆ ನಡೆಯಬೇಕಿದೆ.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಭೂಷಣ್, “ಒಂದು ದೇಶ, ಒಂದು ಚುನಾವಣೆಯನ್ನು ಭಾರತದಂತಹ ಸಂಸದೀಯ ಪ್ರಜಾತಂತ್ರ ಹೊಂದಿರುವ ದೇಶದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಯಾಕೆಂದರೆ, ನಮ್ಮ ವ್ಯವಸ್ಥೆಯಲ್ಲಿ ಸರ್ಕಾರವೊಂದು ಬಹುಮತ ಕಳೆದುಕೊಂಡರೆ ಪತನವಾಗುತ್ತದೆ ಮತ್ತು ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ” ಎಂದು ಹೇಳಿದ್ದಾರೆ. ಆದರೆ, ಒಂದು ದೇಶ ಒಂದು ಚುನಾವಣೆಯನ್ನು ಜಾರಿಗೊಳಿಸಿದರೆ, ಅಂತಹ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕಾಗುತ್ತದೆ. ಇದು ಪ್ರಜಾತಂತ್ರ ವಿರೋಧಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
“ಇದರರ್ಥ ನಾವು ಪ್ರಜಾತಾಂತ್ರಿಕ ವ್ಯವಸ್ಥೆಯಿಂದ ಅಧ್ಯಕ್ಷೀಯ ಆಡಳಿತ ವ್ಯವಸ್ಥೆಗೆ ಬದಲಾಗುತ್ತಿದ್ದೇವೆ ಎಂದು ಅರ್ಥ. ಹೀಗಾಗಿ, ಇದು ಸಂಪೂರ್ಣವಾಗಿ ಸಂಸದೀಯ ಪ್ರಜಾತಂತ್ರದ ಉಲ್ಲಂಘನೆ. ನನ್ನ ಪ್ರಕಾರ, ಈ ಸಂಗತಿ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿದಿದೆ ಮತ್ತು ಅಧ್ಯಕ್ಷೀಯ ಆಡಳಿತ ವ್ಯವಸ್ಥೆಗೆ ಬದಲಾಗಲು ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ತರಬೇಕಾಗುತ್ತದೆ ಎಂಬುದೂ ಅದಕ್ಕೆ ತಿಳಿದಿದೆ” ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಹಾಲಿ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಸರ್ಕಾರಕ್ಕೆ ಈ ಎಲ್ಲ ವಾಸ್ತವಗಳೂ ತಿಳಿದಿವೆ. ಆದರೂ, ಈ ವರ್ಷದ ನಂತರ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯ ಚುನಾವಣೆಗಳನ್ನು ಮುಂದೂಡಲು ಈ ಬಲೂನನ್ನು (ಒಂದು ದೇಶ, ಒಂದು ಚುನಾವಣೆ) ತೇಲಿ ಬಿಡಲಾಗಿದೆ ಎಂದು ಅವರು ಟೀಕಿಸಿದ್ದಾರೆ.
“ಈ ಐದು ರಾಜ್ಯಗಳಿಗೆ ನಡೆಯುವ ಚುನಾವಣೆಯಲ್ಲಿ ಪರಾಭವಗೊಳ್ಳುವ ಭೀತಿಯನ್ನು ಬಿಜೆಪಿ ಸರ್ಕಾರ ಎದುರಿಸುತ್ತಿದೆ. ಹೀಗಾಗಿ ಅವರು ‘ಒಂದು ದೇಶ, ಒಂದು ಚುನಾವಣೆ’ ಹೆಸರಿನಲ್ಲಿ 2024ರ ಸಾರ್ವತ್ರಿಕ ಚುನಾವಣೆಯವರೆಗೂ ವಿಧಾನಸಭಾ ಚುನಾವಣೆಗಳನ್ನು ಮುಂದೂಡಲಿದ್ದಾರೆ. ಈ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಗುತ್ತದೆ” ಎಂದು ಅವರು ಪ್ರತಿಪಾದಿಸಿದ್ದಾರೆ.