ಒಂದು ರಾಷ್ಟ್ರ, ಒಂದು ಚುನಾವಣೆ ಒಪ್ಪುವುದಿಲ್ಲ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ | Photo: PTI
ಹೊಸದಿಲ್ಲಿ, ಜ. 11: ಲೋಕಸಭೆ ಹಾಗೂ ವಿಧಾನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ‘‘ಒಂದು ರಾಷ್ಟ್ರ, ಒಂದು ಚುನಾವಣೆ’’ ಪರಿಕಲ್ಪನೆಗೆ ಗುರುವಾರ ಅಸಮ್ಮತಿ ಸೂಚಿಸಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದಿದ್ದಾರೆ.
ಲೋಕಸಭೆ ಹಾಗೂ ವಿಧಾನ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಭಾರತದ ಸಂವಿಧಾನದ ಮೂಲ ರಚನೆಗೆ ವಿರುದ್ಧವಾದುದು ಎಂದು ಅವರು ಹೇಳಿದ್ದಾರೆ.
ಪತ್ರದಲ್ಲಿ ಮಮತಾ ಬ್ಯಾನರ್ಜಿ ಅವರು, 1952ರಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಗಳನ್ನು ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ಏಕ ಕಾಲದಲ್ಲಿ ನಡೆಸಲಾಯಿತು.
‘‘ಕೆಲವು ವರ್ಷಗಳ ಕಾಲ ಈ ರೀತಿ ಏಕಕಾಲದಲ್ಲಿ ಚುನಾವಣೆ ನಡೆಯಿತು. ಆದರೆ, ಅನಂತರ ಅದು ನಿಂತಿತು’’ ಎಂದು ಅವರು ಹೇಳಿದ್ದಾರೆ.
‘‘ನೀವು ರೂಪಿಸಿದ ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆಯನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಸೂತ್ರೀಕರಣ ಹಾಗೂ ಪ್ರಸ್ತಾವವನ್ನು ನಾವು ಒಪ್ಪುವುದಿಲ್ಲ’’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಅಭಿಪ್ರಾಯ ಕೋರಿ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿದೆ.