ಆನ್ಲೈನ್ ಗೇಮಿಂಗ್ ಚಟ: ಸಾಲ ತೀರಿಸಲು ಜೀವ ವಿಮೆಗಾಗಿ ತಾಯಿಯನ್ನೇ ಹತ್ಯೆಗೈದ ಪುತ್ರ
Photo: NDTV
ಫತೇಪುರ್, ಉತ್ತರ ಪ್ರದೇಶ: ಆನ್ಲೈನ್ ಗೇಮಿಂಗ್ ಚಟದಿಂದಾಗಿ ಯುವಕನೊಬ್ಬ ತನ್ನ ತಾಯಿಯನ್ನೇ ಹತ್ಯೆಗೈದಿದ್ದಾನೆ. ತಾಯಿ ಹೆಸರಿನಲ್ಲಿರುವ ಜೀವ ವಿಮೆ ಪಾವತಿಯನ್ನು ಕ್ಲೈಮ್ ಮಾಡಿ ತನ್ನ ಸಾಲವನ್ನು ತೀರಿಸಲು ಆರೋಪಿ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಫತೇಪುರ್ನಲ್ಲಿ ಆರೋಪಿ ಹಿಮಾಂಶು ರೂ. 50 ಲಕ್ಷ ವಿಮೆ ಪಡೆಯಲು ತನ್ನ ತಾಯಿಯನ್ನು ಕೊಂದು ನಂತರ ಆಕೆಯ ಶವವನ್ನು ಯಮುನಾ ನದಿ ದಡದ ಬಳಿ ವಿಲೇವಾರಿ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಆರೋಪಿಯು ಝುಪಿ ಪ್ಲಾಟ್ಫಾರ್ಮ್ ನಲ್ಲಿ ಗೇಮಿಂಗ್ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವ್ಯಸನವು ಆತನಿಗೆ ಸಾಕಷ್ಟು ಸಾಲವನ್ನು ಉಂಟು ಮಾಡಿತ್ತು. ಒಂದು ಹಂತದ ನಂತರ, ಆತನಿಗೆ ಸುಮಾರು ₹ 4 ಲಕ್ಷ ಸಾಲವಾಗಿದ್ದು, ಸಾಲಗಾರರಿಗೆ ಮರುಪಾವತಿ ಮಾಡಲು ದಿಕ್ಕು ತೋಚದಾದಾಗ ಆತ ಕೊಲೆಗೆ ಸಂಚು ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಾಂಶು, ತನ್ನ ತಂದೆಯ ಚಿಕ್ಕಮ್ಮನ ಚಿನ್ನಾಭರಣಗಳನ್ನು ಕದ್ದೊಯ್ದು, ತನ್ನ ಹೆತ್ತವರಿಗೆ ತಲಾ ₹ 50 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಿದ್ದ. ಇದಾದ ಕೆಲವೇ ದಿನಗಳಲ್ಲಿ, ತಂದೆ ಇಲ್ಲದಿದ್ದಾಗ ತಾಯಿ ಪ್ರಭಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಸೆಣಬಿನ ಚೀಲದಲ್ಲಿ ಹಾಕಿ ಅದನ್ನು ಟ್ರ್ಯಾಕ್ಟರ್ ಮೂಲಕ ಯಮುನಾ ನದಿಯ ದಡಕ್ಕೆ ಕೊಂಡು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಚಿತ್ರಕೂಟ ದೇವಸ್ಥಾನಕ್ಕೆ ತೆರಳಿದ್ದ ಹಿಮಾಂಶುವಿನ ತಂದೆ ರೋಷನ್ ಸಿಂಗ್ ಹಿಂತಿರುಗಿ ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಮಗ ಕಾಣಲಿಲ್ಲ. ವಿಚಾರಿಸಿದಾಗ ಹಿಮಾಂಶು ನನ್ನು ನದಿಯ ಬಳಿ ನೋಡಿದ್ದಾಗಿ ತಿಳಿದು ಬಂದಿದೆ.
ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಯಮುನಾ ಬಳಿಯಿಂದ ಮೃತದೇಹ ಪತ್ತೆಯಾಗಿದೆ. ಆರೋಪಿ ಹಿಮಾಂಶು ನನ್ನು ಬಂಧಿಸಿದ್ದು, ವಿಚಾರಣೆಯು ವೇಳೆ ತನ್ನ ಸಾಲವನ್ನು ತೀರಿಸಲು ತನ್ನ ತಾಯಿಯನ್ನು ಕೊಲ್ಲಲು ಸಂಚು ರೂಪಿಸಿದ ಆಘಾತಕಾರಿ ಸಂಚು ಬಹಿರಂಗವಾಯಿತು. "ತಾಯಿಯನ್ನು ಕೊಂದ ನಂತರ ಆರೋಪಿ ಪರಾರಿಯಾಗಿದ್ದ. ನಾವು ಅವನನ್ನು ಹಿಡಿದು ಅಪರಾಧವನ್ನು ಬಯಲಿಗೆಳೆದಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯ್ ಶಂಕರ್ ಮಿಶ್ರಾ ಹೇಳಿದ್ದಾರೆ.