ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿ ಜನಗಣತಿ ನಡೆಸುವ ಅಧಿಕಾರವಿದೆ: ಸುಪ್ರೀಂ ಎದುರು ಕೇಂದ್ರದ ವಾದ
ಬಿಹಾರ ಜಾತಿ ಜನಗಣತಿ ಪ್ರಕರಣ
PHOTO/PTI
ಹೊಸದಿಲ್ಲಿ: ಕೇಂದ್ರ ಸರ್ಕಾರಕ್ಕೆ ಮಾತ್ರ ಜನಗಣತಿ ನಡೆಸುವ ಅಧಿಕಾರವಿದೆ ಎಂದು ಬಿಹಾರ ಜಾತಿ ಜನಗಣತಿ ಪ್ರಕರಣದ ಕುರಿತು ಆಗಸ್ಟ್ 28ರಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಪ್ರತಿಪಾದಿಸಿದೆ ಎಂದು thehindu.com ವರದಿ ಮಾಡಿದೆ.
ಈ ಕುರಿತು ಸುಪ್ರೀಂ ಕೋರ್ಟ್ ಗೆ ಎರಡು ಪುಟಗಳ ಪ್ರಮಾಣ ಪತ್ರ ಸಲ್ಲಿಸಿರುವ ಗೃಹ ಸಚಿವಾಲಯದ ಪ್ರಧಾನ ನೋಂದಣಾಧಿಕಾರಿ ಕಚೇರಿ, “ಜನಗಣತಿಯು ಜನಗಣತಿ ಕಾಯ್ದೆ 1948ರ ಅಡಿ ನಡೆಯುವ ಶಾಸನಾತ್ಮಕ ಪ್ರಕ್ರಿಯೆಯಾಗಿದ್ದು, ಜನಗಣತಿಯನ್ನು ಸಂವಿಧಾನದ ಏಳನೇ ಪರಿಚ್ಛೇದದ ಒಕ್ಕೂಟ ಪಟ್ಟಿಯ 69ನೇ ನಮೂದಿನಡಿ ಸೇರ್ಪಡೆ ಮಾಡಲಾಗಿದೆ” ಎಂದು ಹೇಳಿದೆ.
ಆಗಸ್ಟ್ 28ರಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡಾವೆಟ್ನಲ್ಲಿ, “ಬೇರೆ ಯಾವ ಅಂಗಕ್ಕೂ ಜನಗಣತಿ ಅಥವಾ ಅದನ್ನು ಹೋಲುವಂಥ ಪ್ರಯೋಗವನ್ನು ಮಾಡುವ ಅಧಿಕಾರವಿಲ್ಲ” ಎಂದು ಹೇಳಿದೆ. ಈ ಅಂಶಗಳನ್ನು ಪರಿಷ್ಕೃತ ಪ್ರಮಾಣ ಪತ್ರದಲ್ಲಿ ಸರಿಪಡಿಸಿ ಸೇರ್ಪಡೆ ಮಾಡಲಾಗಿದೆ. ಇದಕ್ಕೂ ಮುನ್ನ, ಬಿಹಾರ ಸರ್ಕಾರವು ತನ್ನ ಕ್ರಮವು ಕಡ್ಡಾಯ ಜನಗಣತಿಯಲ್ಲ; ಬದಲಿಗೆ ತನ್ನ ರಾಜ್ಯದ ಜನರ ಕಲ್ಯಾಣಕ್ಕಾಗಿ ನಡೆಸುತ್ತಿರುವ ಸಮೀಕ್ಷೆ ಎಂದು ಸುಪ್ರೀಂ ಕೋರ್ಟ್ ಎದುರು ವಾದಿಸಿತ್ತು.
ಇದಕ್ಕೂ ಮುನ್ನ, ನಿತೀಶ್ ಕುಮಾರ್ ಸರ್ಕಾರವು ಇತ್ತೀಚೆಗೆ ನಡೆಸಿರುವ ಜಾತಿ ಆಧಾರಿತ ಸಮೀಕ್ಷೆಯಿಂದಾಗಿ ಜನರು ತಮ್ಮ ಜಾತಿಯನ್ನು ಬಹಿರಂಗಪಡಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇದರಿಂದ ಮೂಲಭೂತ ಖಾಸಗಿ ಹಕ್ಕಿನ ಉಲ್ಲಂಘನೆಯಾದಂತಾಗಿದೆ ಎಂಬ ವಾದಗಳನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಬಿಹಾರ ಸರ್ಕಾರ ಸಂಗ್ರಹಿಸಿರುವ ಜಾತಿ ಸಮೀಕ್ಷೆಯ ದತ್ತಾಂಶಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸದಂತೆ ತಡೆ ನೀಡಲು ನಿರಾಕರಿಸಿತು.
ಆಗಸ್ಟ್ 1ರಂದು ಬಿಹಾರ ಸರ್ಕಾರದ ಜಾತಿ ಸಮೀಕ್ಷೆ ನ್ಯಾಯಸಮ್ಮತವಾಗಿರುವುದನ್ನು ಪಾಟ್ನಾ ಹೈಕೋರ್ಟ್ ಎತ್ತಿ ಹಿಡಿದಿತ್ತು.