ಅದಾನಿ ವಿರುದ್ಧ ಪ್ರತಿಪಕ್ಷಗಳಿಂದ ಮುಂದುವರಿಂದ ಪ್ರತಿಭಟನೆ
PC : PTI
ಹೊಸದಿಲ್ಲಿ : ಪ್ರತಿಪಕ್ಷಗಳ ಹಲವು ಸದಸ್ಯರು ಸಂಸತ್ ಆವರಣದಲ್ಲಿ ಗುರುವಾರ ಬೇರೆ ಬೇರೆ ಹಿಂದಿ ಅಕ್ಷರಗಳ ಪ್ರದರ್ಶನಾ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಈ ಅಕ್ಷರಗಳೆನ್ನಲ್ಲ ಜೋಡಿಸಿ ಓದಿದರೆ ‘‘ದೇಶ್ ಬಿಕ್ನೇ ನಹೀಂ ದೇಂಗೇ’’ (ದೇಶವನ್ನು ಮಾರಲು ಬಿಡುವುದಿಲ್ಲ) ಎಂದಾಗುತ್ತದೆ.
ಅದಾನಿ ವಿಷಯದ ಕುರಿತಂತೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಅವರು ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್, ಡಿಎಂಕೆ, ಎಡ ಪಕ್ಷಗಳು ಹಾಗೂ ಇತರ ಪಕ್ಷಗಳ ಸಂಸದರು ಮಕರ ದ್ವಾರದ ಮೆಟ್ಟಿಲು ಹಾಗೂ ಸಂವಿಧಾನ ಸದನದ ಮುಂದೆ ಪ್ರತಿಭಟನೆ ನಡೆಸಿದರು.
ಮೋದಿ ಹಾಗೂ ಅದಾನಿ ನಡುವೆ ಅಪವಿತ್ರ ಮೈತ್ರಿ ಇದೆ ಎಂದು ಆರೋಪಿಸಿದ ಅವರು ಘೋಷಣೆಗಳನ್ನು ಕೂಗಿದರು. ಅಲ್ಲದೆ, ಈ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯಿಂದ ತನಿಖೆ ನಡೆಸುವಂತೆ ಆಗ್ರಹಿಸಿದರು.
ಸಂಸತ್ತಿನ ಆವರಣದಲ್ಲಿ ಬುಧವಾರ ಪ್ರತಿಪಕ್ಷದ ಹಲವು ಸಂಸದರು ಒಂದು ಕೈಯಲ್ಲಿ ಪುಟ್ಟ ತ್ರಿವರ್ಣ ಧ್ವಜ ಹಾಗೂ ಇನ್ನೊಂದು ಕೈಯಲ್ಲಿ ಕೆಂಪು ಗುಲಾಬಿ ಹಿಡಿದುಕೊಂಡು ತಮ್ಮ ಬಿಜೆಪಿಯ ಸಹೋದ್ಯೋಗಿಗಳನ್ನು ಸ್ವಾಗತಿಸಿದ್ದರು. ಅಲ್ಲದೆ, ಸದನ ಸುಗಮವಾಗಿ ನಡೆಸುವಂತೆ ಹಾಗೂ ಅದಾನಿ ವಿಷಯ ಸೇರಿದಂತೆ ಎಲ್ಲಾ ವಿಷಯಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದರು.