ಸಂಸದರ ಸಾಮೂಹಿಕ ಅಮಾನತು ವಿರೋಧಿಸಿ ವಿಪಕ್ಷ ಸಂಸದರಿಂದ ಪ್ರತಿಭಟನೆ
Photo credit: ANI
ಹೊಸದಿಲ್ಲಿ: ಸಂಸದರನ್ನು ಸಾಮೂಹಿಕವಾಗಿ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಪಕ್ಷದ ಸಂಸದರು ಗುರುವಾರ ಸಂಸತ್ ಭವನದಿಂದ ದಿಲ್ಲಿಯ ವಿಜಯ್ ಚೌಕ್ ವರೆಗೆ ಮೆರವಣಿಗೆ ನಡೆಸಿದರು.
ಲೋಕಸಭೆಯ 97 ಮತ್ತು ರಾಜ್ಯಸಭೆಯ 46 ಸೇರಿದಂತೆ ಅಮಾನತುಗೊಂಡ ಸಂಸದರು ಡಿಸೆಂಬರ್ 13 ರಂದು ನಡೆದ ಸಂಸತ್ ಭದ್ರತಾ ವೈಫಲ್ಯದ ಬಗ್ಗೆ ಚರ್ಚೆಗೆ ಬೇಡಿಕೆ ಇಟ್ಟು ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಸತ್ತಿನಲ್ಲಿ ಭದ್ರತಾ ಲೋಪದ ಬಗ್ಗೆ ಮಾತನಾಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಪ್ರತಿಪಕ್ಷದ ಸಂಸದರು ಈ ವಿಷಯವನ್ನು ಸದನದಲ್ಲಿ ಚರ್ಚೆಗೆ ತರಲು ಪ್ರಯತ್ನಿಸಿದರೂ ಆಡಳಿತ ಪಕ್ಷದ ಸಂಸದರು ಅದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸಂಸತ್ತಿನಿಂದ ವಿಜಯ್ ಚೌಕ್ಗೆ ವಿಪಕ್ಷಗಳ ಸಂಸದರು ನಡೆಸಿದ ಮೆರವಣಿಗಾ ಪ್ರತಿಭಟನೆಯಲ್ಲಿ 'ಸಂಸತ್ತು ಪಂಜರದಲ್ಲಿ ಸಿಲುಕಿದೆ, ಪ್ರಜಾಪ್ರಭುತ್ವವನ್ನು ಹೊರಹಾಕಲಾಗಿದೆ' ಎಂಬ ಫಲಕಗಳನ್ನು ಹಿಡಿದು ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಭದ್ರತಾ ವೈಫಲ್ಯ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಸಂಸತ್ತಿನ ಹೊರಗೆ ಮಾತನಾಡಿದ್ದು, ಲೋಕಸಭೆಯ ಬಗ್ಗೆ ಸದನಕ್ಕೆ ತಿಳಿಸದಿರುವುದು ಸದನದ ವಿಶೇಷ ಹಕ್ಕು ಉಲ್ಲಂಘನೆಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಭದ್ರತಾ ವೈಫಲ್ಯದ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ನಾವು ಲೋಕಸಭೆ ಸ್ಪೀಕರ್, ರಾಜ್ಯಸಭಾ ಅಧ್ಯಕ್ಷರಿಗೆ ಪದೇ ಪದೇ ಮನವಿ ಮಾಡುತ್ತಿದ್ದೇವೆ ಆದರೆ ಆಡಳಿತ ಪಕ್ಷದ ಸಂಸದರು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದರು.
ಸಾಮೂಹಿಕ ಅಮಾನತು ಕ್ರಮವನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಶುಕ್ರವಾರ ಜಂತರ್ ಮಂತರ್ನಲ್ಲಿ ಪ್ರತಿಭಟಿಸುವ ಯೋಜನೆಯನ್ನು ಪ್ರಕಟಿಸಿದ್ದು, ರಾಷ್ಟ್ರವ್ಯಾಪಿಯಾಗಿಯೂ ಪ್ರತಿಭಟನೆಗಳನ್ನು ನಡೆಸಲು ಕರೆ ನೀಡಿದ್ದಾರೆ.