ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ: ಬಜೆಟ್ ಅಧಿವೇಶನವರೆಗೆ ಸಮಯಾವಕಾಶ ಕೋರಿದ ಸಂಸದೀಯ ಸಮಿತಿ
x.com/mathrubhumieng
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯಲ್ಲಿರುವ ವಿರೋಧ ಪಕ್ಷಗಳ ಸದಸ್ಯರ ತೀವ್ರ ಪ್ರತಿಭಟನೆ ಬಳಿಕ, ಸಮಿತಿ ತನ್ನ ವರದಿ ಸಲ್ಲಿಸಲು ಮುಂದಿನ ವರ್ಷದ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ಸಮಯಾವಕಾಶ ಕೋರಿದೆ.
ಈ ವಿಸ್ತರಣೆಗೆ ಅನುಮೋದನೆ ಕೋರುವ ಪ್ರಸ್ತಾವದ ಬಗ್ಗೆ ಗುರುವಾರದ ಕಲಾಪದಲ್ಲಿ ಚರ್ಚೆಗೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷೆ ಮತ್ತು ಬಿಜೆಪಿ ಸದಸ್ಯೆ ಜಗದಾಂಬಿಕಾ ಪಾಲ್ ನಿಲುವಳಿ ಸೂಚನೆ ಮಂಡಿಸಿದರು.
ಬುಧವಾರ ನಡೆದ ಜೆಪಿಸಿ ಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು, ಸಭೆಯ ನಡಾವಳಿಗಳು ಅಣಕ ಎನಿಸಿವೆ ಎಂದು ಆಪಾದಿಸಿದ್ದರಿಂದ ಇದು ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಸಮಿತಿ ತನ್ನ ಅವಧಿಯನ್ನು ವಿಸ್ತರಿಸಲು ಕೋರುವುದಾಗಿ ಅಧ್ಯಕ್ಷರು ಭರವಸೆ ನೀಡಿದ ಬಳಿಕ ಕೆಲ ಗಂಟೆಗಳ ಬಳಿಕ ಸಭೆಗೆ ವಿರೋಧ ಪಕ್ಷಗಳ ಸದಸ್ಯರು ಹಾಜರಾಗಿದ್ದರು.
ಈ ಮುಂದೂಡಿಕೆಯನ್ನು ವಿರೋಧ ಪಕ್ಷಗಳ ಜಯ ಎಂದು ವಿಶ್ಲೇಷಿಸಲಾಗುತ್ತಿದ್ದರೂ, ಇದು ಮುಂದಿನ ಫೆಬ್ರವರಿಯಲ್ಲಿ ನಡೆಯುವ ದೆಹಲಿ ವಿಧಾನಸಭಾ ಚುನಾವಣೆ ವೇಳೆ ಚರ್ಚೆಗೆ ಬರುವ ಮತ್ತು ಈ ವಿವಾದಾತ್ಮಕ ಮಸೂದೆ ಆಂಗೀಕಾರವಾಗುವ ಸಾಧ್ಯತೆ ಇದೆ. ಫೆಬ್ರವರಿ 1ರಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ದೆಹಲಿಯಲ್ಲಿ ವಕ್ಫ್ ಮಂಡಳಿಗೆ ಆಸ್ತಿ ಹಸ್ತಾಂತರ ಮಾಡಿರುವ ಕ್ರಮ ಪ್ರಮುಖ ಚುನಾವಣಾ ವಿಷಯವಾಗುವ ಸಾಧ್ಯತೆ ಇದೆ.