ಪ್ರತಿಪಕ್ಷಗಳ ವರ್ತನೆ ಅಸಮಾಧಾನಕಾರಿಯಾಗಿದೆ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ
ಸಂಸತ್ತಿನಲ್ಲಿ ಮುಂದುವರಿದ ವಿಪಕ್ಷಗಳ ಗದ್ದಲ
ಲೋಕಸಭಾ ಸ್ಪೀಕರ್ ಓಂ ಬಿರ್ಲಾ | PC : PTI
ಹೊಸ ದಿಲ್ಲಿ: ಅಮೆರಿಕದ ಉದ್ಯಮಿ ಜಾರ್ಜ್ ಸೊರೋಸ್ ಜೊತೆಗೆ ಕಾಂಗ್ರೆಸ್ ಸಂಪರ್ಕದ ಆರೋಪ ಕುರಿತು ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಮೈತ್ರಿಕೂಟದ ಸಂಸದರ ನಡುವೆ ವಾಗ್ಯುದ್ಧ ತಾರಕಕ್ಕೇರಿ, ಸದನದಲ್ಲಿ ಗದ್ದಲದ ವಾತಾವರಣವೇರ್ಪಟ್ಟಿದ್ದರಿಂದ, ಮಂಗಳವಾರದ ಅಧಿವೇಶನವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಮುಂದೂಡಲಾಯಿತು.
ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳೆರಡೂ ಒಂದು ದಿನದ ಮಟ್ಟಿಗೆ ಅಮಾನತುಗೊಂಡರೂ, ಸದನಕ್ಕೆ ಅಗೌರವ ತೋರುತ್ತಿರುವ ಸಂಸದರ ಬಗ್ಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿಷಾದ ವ್ಯಕ್ತಪಡಿಸಿದರು. “ನಮ್ಮದು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದು, ಕೋಟ್ಯಂತರ ಜನರ ಆಶೋತ್ತರಗಳನ್ನು ಪೂರೈಸುತ್ತದೆ. ನಾವು ಆ ಘನತೆಯನ್ನು ಉಳಿಸಿಕೊಳ್ಳಬೇಕಿದೆ. ಆದರೆ, ಇಲ್ಲಿ ನಡೆಯುತ್ತಿರುವ ಘಟನಾವಳಿಗಳು ಒಳ್ಳೆಯದು ಎಂದು ನನಗನ್ನಿಸುತ್ತಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಅದು ಆಡಳಿತಾರೂಢ ಪಕ್ಷವಾಗಿರಲಿ ಅಥವಾ ವಿರೋಧ ಪಕ್ಷವಾಗಿರಲಿ, ಎಲ್ಲರೂ ಘನತೆಯನ್ನು ಕಾಯ್ದುಕೊಳ್ಳಬೇಕು ಹಾಗೂ ಈ ಪ್ರಜಾಪ್ರಭುತ್ವದ ದೇಗುಲದಿಂದ ಸಕಾರಾತ್ಮಕ ಸಂದೇಶ ಹೊರ ಹೋಗುವಂತೆ ಕಾರ್ಯನಿರ್ವಹಿಸಬೇಕು” ಎಂದು ಕಿವಿಮಾತು ಹೇಳಿದರು.
ಸಮ್ಮತಿ ಮತ್ತು ಅಸಮ್ಮತಿ ಆರೋಗ್ಯಕರ ಪ್ರಜಾಪ್ರಕಭುತ್ವದ ಭಾಗವಾಗಿದೆ. ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರೆಲ್ಲರೂ ಒಂದೆಡೆ ಕುಳಿತು ತಮ್ಮ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದೂ ಅವರು ಮನವಿ ಮಾಡಿದರು.