ಕೇಜ್ರಿವಾಲ್ ಬಂಧನ ವಿರೋಧಿಸಿ ದಿಲ್ಲಿಯಲ್ಲಿ ಪ್ರತಿಪಕ್ಷಗಳ ಬೃಹತ್ ರ್ಯಾಲಿ; ʼಇಂಡಿಯಾʼ ಮೈತ್ರಿಕೂಟದ ನಾಯಕರು ಭಾಗಿ
ರಾಜಧಾನಿಯಲ್ಲಿ ಬಿಗಿ ಭದ್ರತೆ
Photo; NDTV
ಹೊಸದಿಲ್ಲಿ: ಆಪ್ ನ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ, ವಿಪಕ್ಷಗಳ ವಿರುದ್ಧ ತನಿಖಾ ಸಂಸ್ಥೆಗಳ ದುರುಪಯೋಗ ಖಂಡಿಸಿ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ರ್ಯಾಲಿ ಹಮ್ಮಿಕೊಂಡಿದ್ದು, ʼಇಂಡಿಯಾʼ ಮೈತ್ರಿಕೂಟದ ನಾಯಕರು ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಮೈದಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ರಾಮ್ ಲೀಲಾ ಮೈದಾನದಲ್ಲಿ ‘ಪ್ರಜಾತಂತ್ರ ಉಳಿಸಿ’ ಎಂಬ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶವು ಲೋಕಸಭೆ ಚುನಾವಣೆಗೂ ಮುನ್ನ ಇಂಡಿಯಾ ಮೈತ್ರಿಕೂಟದ ಸಾಮರ್ಥ್ಯ ಮತ್ತು ಶಕ್ತಿಯ ಪ್ರದರ್ಶನವಾಗಲಿದೆ.
ಈ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್ಸಿ್ಪಿ (ಶರದ್ ಚಂದ್ರ ಪವಾರ್ ಬಣ) ವರಿಷ್ಠ ಶರದ್ ಪವಾರ್, ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ, ಆರ್ಜೆಡಿಯ ತೇಜಸ್ವಿ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಡೆರೆಕ್ ಒ’ಬ್ರಿಯನ್ ರಂತಹ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯ ಅರವಿಂದ್ ಕೇಜ್ರಿವಾಲ್ ಅವರು ಜಾರಿ ನಿರ್ದೇಶನಾಲಯ ವಶದಲ್ಲಿದ್ದಾರೆ.