ʼಮೂಲ ಸಂವಿಧಾನದಲ್ಲಿ ರಾಮನ ಫೋಟೋವಿತ್ತೇ ಹೊರತು ಔರಂಗಜೇಬ್ ನದ್ದಲ್ಲʼ: ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್
Photo | PTI
ಹೊಸದಿಲ್ಲಿ: ಮೂಲ ಸಂವಿಧಾನವು ಭಗವಾನ್ ರಾಮ, ಭಗವಾನ್ ಹನುಮಾನ್ ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ ಅವರ ಫೋಟೋಗಳನ್ನು ಹೊಂದಿತ್ತು ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಸಂವಿಧಾನದ ಕುರಿತು ನಡೆದ ಚರ್ಚೆಯ ವೇಳೆ ಮಾತನಾಡಿದ ರವಿಶಂಕರ್ ಪ್ರಸಾದ್, ಸತ್ಯದ ಅರಿವಿಲ್ಲದ ಕಾರಣ ರಾಹುಲ್ ಗಾಂಧಿ ತಮ್ಮ ಗುರುವನ್ನು ಬದಲಾಯಿಸಬೇಕಾಗಿದೆ. ʼಋಗ್ವೇದʼದಲ್ಲಿ ಉಲ್ಲೇಖಿಸಿರುವಂತೆ ಭಾರತೀಯ ಪರಂಪರೆಯು ಜಾತ್ಯತೀತ ಸ್ವರೂಪದ್ದಾಗಿದೆ ಎಂದು ಸಂವಿಧಾನ ರಚನೆಕಾರರಿಗೆ ತಿಳಿದಿತ್ತು ಎಂದು ಹೇಳಿದ್ದಾರೆ.
ಮೂಲ ಸಂವಿಧಾನವು ಭಗವಾನ್ ರಾಮ, ಭಗವಾನ್ ಹನುಮಾನ್ ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ ಅವರ ಚಿತ್ರಗಳನ್ನು ಹೊಂದಿತ್ತು, ಆದರೆ ಬಾಬರ್ ಮತ್ತು ಔರಂಗಜೇಬ್ ಅವರ ಚಿತ್ರಗಳನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರವಿಶಂಕರ್ ಪ್ರಸಾದ್, ತುರ್ತು ಪರಿಸ್ಥಿತಿ ಹೇರಿಕೆ ಮೂಲಕ ಲಕ್ಷಾಂತರ ಜನರನ್ನು ಜೈಲಿಗೆ ಕಳುಹಿಸಲಾಗಿದೆ ಮತ್ತು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಲಾಠಿ ಮತ್ತು ಗುಂಡುಗಳನ್ನು ಎದುರಿಸಿ ಇಲ್ಲಿವರೆಗೆ ತಲುಪಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮೌಲಾನಾ ಅಬುಲ್ ಕಲಾಂ ಆಝಾದ್ ಅವರಂತಹ ನಾಯಕರ ಕೊಡುಗೆಯನ್ನು ಗುರುತಿಸಲು ಕಾಂಗ್ರೆಸ್ ವಿಫಲವಾಗಿದೆ. ಯಾವುದೇ ಕಾಂಗ್ರೆಸ್ ನಾಯಕರು ತಮ್ಮ ಭಾಷಣದಲ್ಲಿ ಅವರ ಹೆಸರನ್ನು ಉಲ್ಲೇಖಿಸುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.