ನಮ್ಮ ಮುಂದಿನ ಹೋರಾಟ ಬೀದಿಯಲ್ಲಲ್ಲ, ಕೋರ್ಟ್ ನಲ್ಲಿ: ಕುಸ್ತಿಪಟುಗಳು
ಫೋಟೋ(ಪಿಟಿಐ)
ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಮುಂದಿನ ಹೋರಾಟ ಬೀದಿಯಲ್ಲಲ್ಲ; ನ್ಯಾಯಾಲಯದಲ್ಲಿ ಎಂದು ಪ್ರತಿಭಟನಾನಿರತ ಕುಸ್ತಿಪಟುಗಳು ಹೇಳಿದ್ದಾರೆ.
ತಮ್ಮ ಪ್ರತಿಭಟನೆಯನ್ನು ಮರು ಆರಂಭಿಸುವ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂಬ ಹೇಳಿಕೆ ನೀಡಿದ ಮರುದಿನವೇ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಈ ನಿರ್ಧಾರ ಪ್ರಕಟಿಸಿದ್ದಾರೆ.
"ಸಿಂಗ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂಬ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಈ ಪ್ರಕರಣದಲ್ಲಿ ಕುಸ್ತಿಪಟುಗಳು ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಸಲಿದ್ದಾರೆ; ಆದರೆ ಈ ಹೋರಾಟ ನ್ಯಾಯಾಲಯದಲ್ಲಿರುತ್ತದೆ; ರಸ್ತೆಯಲ್ಲಲ್ಲ. ಡಬ್ಲ್ಯುಎಫ್ಐ ಸುಧಾರಣೆ, ಚುನಾವಣಾ ಪ್ರಕ್ರಿಯೆಗಳು ಈಗಾಗಲೇ ಆಶ್ವಾಸನೆ ನೀಡಿದಂತೆ ಆರಂಭವಾಗಿವೆ. ಜುಲೈ 11ರಂದು ಚುನಾವಣೆ ನಡೆಸುವುದಾಗಿ ನೀಡಿರುವ ಭರವಸೆಯನ್ನು ಸರ್ಕಾರ ಈಡೇರಿಸುವುದನ್ನು ನಾವು ಕಾಯುತ್ತಿದ್ದೇವೆ ಎಂದು ಮೂವರು ಅಗ್ರ ಕುಸ್ತಿಪಟುಗಳು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ, ಸಾಮಾಜಿಕ ಜಾಲತಾಣಗಳಿಂದ ಕೆಲ ದಿನಗಳ ಕಾಲ ವಿರಾಮ ಪಡೆಯುತ್ತಿರುವುದಾಗಿ ವಿನೇಶ್ ಹಾಗೂ ಸಾಕ್ಷಿ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶನಿವಾರ ನೇರ ಪ್ರಸಾರದ ಭಾಷಣ ಮಾಡಿದ ವಿನೇಶ್, ಸಾಕ್ಷಿ ಹಾಗೂ ಬಜರಂಗ್, ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್ ನಿಂದ ವಿನಾಯಿತಿ ನೀಡಿದ ಐಓಎ ತಾತ್ಕಾಲಿಕ ಸಮಿತಿಯ ನಿರ್ಧಾರ ಪ್ರಶ್ನಿಸಿದ್ದ ಕುಸ್ತಿಪಟು, ಬಿಜೆಪಿ ಮುಖಂಡ ಯೋಗೇಶ್ವರ್ ದತ್ ಅವರನ್ನು ಕಟುವಾಗಿ ಟೀಕಿಸಿದ್ದಾರೆ.