ಬಿಜೆಪಿಗೆ ನಮ್ಮ ವಿರೋಧ, ಕೇಂದ್ರ ಸರಕಾರಕ್ಕಲ್ಲ: ಉಮರ್ ಅಬ್ದುಲ್ಲಾ
PC : PTI
ಹೊಸದಿಲ್ಲಿ: ನಮ್ಮ ವಿರೋಧ ಬಿಜೆಪಿಯ ರಾಜಕೀಯದೊಂದಿಗೇ ಹೊರತು, ಕೇಂದ್ರ ಸರಕಾರದ ಜೊತೆಗಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಸಮಸ್ಯೆಗಳು ಹಾಗೂ ತೊಂದರೆಗಳನ್ನು ಕೇಂದ್ರದೊಂದಿಗೆ ಜಗಳವಾಡುವ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಬಿಜೆಪಿಯ ರಾಜಕೀಯವನ್ನು ಒಪ್ಪುವುದಿಲ್ಲ, ಅವರು ನಮ್ಮ ರಾಜಕೀಯವನ್ನು ಒಪ್ಪುವುದಿಲ್ಲ. ಆದರೆ, ಅದಕ್ಕಾಗಿ ಕೇಂದ್ರದೊಂದಿಗೆ ಸಂಘರ್ಷಕ್ಕಿಳಿಯಬೇಕಾದ ಅನಿವಾರ್ಯತೆ ನಮಗಿಲ್ಲ. ಕೇಂದ್ರ ಸರಕಾರದೊಂದಿಗಿನ ಸಮರ್ಪಕ ಸಂಬಂಧದಿಂದ ಜಮ್ಮು ಮತ್ತು ಕಾಶ್ಮೀರ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಒಳಿತಾಗಲಿದೆ ಎಂಬುದು ನನ್ನ ಅನಿಸಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನ ಸಂಘರ್ಷಕ್ಕಾಗಿ ಮತ ನೀಡಿಲ್ಲ. ಬದಲಿಗೆ ಅವರು ಉದ್ಯೋಗ, ಪ್ರಗತಿ, ರಾಜ್ಯ ಸ್ಥಾನಮಾನ, ವಿದ್ಯುತ್ ಪೂರೈಕೆಯಲ್ಲಿ ಪರಿಹಾರ ಹಾಗೂ ಮತ್ತಿತರ ಸಮಸ್ಯೆಗಳ ಪರಿಹಾರಕ್ಕಾಗಿ ಮತ ಚಲಾಯಿಸಿದ್ದಾರೆ” ಎಂದೂ ಅವರು ಹೇಳಿದರು.
ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿಸುವ ಭರವಸೆ ನೀಡಿದ್ದು, ಈ ದೀರ್ಘಕಾಲೀನ ಬೇಡಿಕೆಯನ್ನು ಪೂರೈಸಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಭರವಸೆಯನ್ನು ಈಡೇರಿಸುವುದು ಮಾತ್ರ ಬಾಕಿ ಉಳಿದಿದೆ ಎಂದು ಹೇಳಿದ ಉಮರ್ ಅಬ್ದುಲ್ಲಾ, ದಿಲ್ಲಿಯ ಇಂತಹುದೇ ಬೇಡಿಕೆಯ ಬಗ್ಗೆ ಗಮನ ಸೆಳೆದರು.
“ದಿಲ್ಲಿ ಮತ್ತು ನಮ್ಮ ನಡುವೆ ವ್ಯತ್ಯಾಸವಿದೆ. ದಿಲ್ಲಿ ಎಂದಿಗೂ ಪೂರ್ಣಪ್ರಮಾಣದ ರಾಜ್ಯವಾಗಿರಲಿಲ್ಲ ಹಾಗೂ ಯಾರೂ ಕೂಡಾ ಅದಕ್ಕೆ ರಾಜ್ಯ ಸ್ಥಾನಮಾನ ನೀಡುವ ಭರವಸೆ ನೀಡಿರಲಿಲ್ಲ. ಆದರೆ, 2019ಕ್ಕೂ ಮುಂಚೆ ಜಮ್ಮು ಮತ್ತು ಕಾಶ್ಮೀರ ಪೂರ್ಣಪ್ರಮಾಣದ ರಾಜ್ಯವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್ವಿಂಗಡಣೆ, ಚುನಾವಣೆ ಮತ್ತು ರಾಜ್ಯ ಸ್ಥಾನಮಾನ ಮರಳಿಸುವ ಕುರಿತು ಪ್ರಧಾನಿ, ಗೃಹ ಸಚಿವರು ಹಾಗೂ ಹಿರಿಯ ಬಿಜೆಪಿ ಸಚಿವರು ಭರವಸೆ ನೀಡಿದ್ದರು ಎಂದು ಅವರು ನೆನಪಿಸಿದರು.