ಭಾರತ ಸರಕಾರದ 90 ಕಾರ್ಯದರ್ಶಿಗಳಲ್ಲಿ ಹಿಂದುಳಿದ ವರ್ಗದವರು ಕೇವಲ ಮೂವರು : ರಾಹುಲ್ ಗಾಂಧಿ
ದೇಶದಲ್ಲಿ ತಕ್ಷಣ ಜಾತಿ ಗಣತಿ ನಡೆಯಬೇಕು ಎಂದ ಕಾಂಗ್ರೆಸ್ ನಾಯಕ
ರಾಹುಲ್ ಗಾಂಧಿ | Photo: ANI
ಹೊಸದಿಲ್ಲಿ : ಭಾರತ ಸರಕಾರದ 90 ಕಾರ್ಯದರ್ಶಿಗಳಲ್ಲಿ ಕೇವಲ 3 ಜನ ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿದವರು. ದೇಶದ ಜನಸಂಖ್ಯೆಯಲ್ಲಿ ಬಹುಪಾಲು ಹೊಂದಿರುವ ಹಿಂದುಳಿದ ವರ್ಗಗಳಿಂದ ಕೇವಲ 3 ಕಾರ್ಯದರ್ಶಿಗಳು ಎಂಬುದು ಬಹು ದೊಡ್ಡ ಅವಮಾನ, ನಾಚಿಕೆಗೇಡು ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಬುಧವಾರ ಸಂಸತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಸೂದೆಯಲ್ಲಿ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಬೇಕು ಎಂದು ಪ್ರತಿಪಾದಿಸಿದ್ದಾರೆ. ಈ ದೇಶದ ಲೋಕಸಭೆ, ವಿಧಾನ ಸಭೆಗಳು, ಆಡಳಿತ ಶಾಹಿ, ನ್ಯಾಯಾಂಗ, ಪತ್ರಿಕಾ ರಂಗ ಗಳಲ್ಲಿ ಹಿಂದುಳಿದವರ ಪ್ರಾತಿನಿಧ್ಯ ಕಡಿಮೆಯಿರುವುದು ಆಘಾತಕಾರಿ. ನರೇಂದ್ರ ಮೋದಿಯವರು ಹಿಂದುಳಿದ ವರ್ಗಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತದೆ. ಆದರೆ ಭಾರತ ಸರಕಾರದಲ್ಲಿ ಕೇವಲ 3 ಜನ ಮಾತ್ರ ಹಿಂದುಳಿದ ವರ್ಗಗಳಿಗೆ ಸೇರಿದವರು ಕಾರ್ಯದರ್ಶಿಗಳಾಗಿದ್ದಾರೆ ಎಂದು ಅವರು ಹೇಳಿದರು.
ಈ ದೇಶದ ಒಬಿಸಿಗಳು, ದಲಿತರಿಗೆ, ಆದಿವಾಸಿಗಳಿಗೆ ಎಷ್ಟು ಪ್ರಾತಿನಿಧ್ಯ ಸಿಕ್ಕಿದೆ ಎಂಬುದು ಗೊತ್ತಾಗಲು ಜಾತಿ ಗಣತಿ ನಡೆಯಲೇ ಬೇಕು. ಆದಷ್ಟು ಬೇಗ ಆ ಕೆಲಸ ನಡೆಯಲಿ. ಈ ಸರಕಾರ ಅದಾನಿಯ ವಿಷಯ ಹಾಗು ಜಾತಿ ಗಣತಿಯ ವಿಷಯ ಚರ್ಚೆಗೆ ಬಂದ ಕೂಡಲೇ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತದೆ.
ಅದಕ್ಕೇನು ಕಾರಣ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ಪ್ರತಿ ಬಾರಿ ವಿಪಕ್ಷದವರು ಜಾತಿ ಗಣತಿಯ ವಿಷಯ ತೆಗೆದುಕೊಂಡ ಕೂಡಲೇ ಈ ಸರಕಾರ ಏನಾದರೊಂದು ಹೊಸ ವಿಷಯವನ್ನು ದಿಢೀರನೇ ತಂದು ಈ ದೇಶದ ಹಿಂದುಳಿಗ ವರ್ಗಗಳು ಹಾಗು ಈ ದೇಶದ ಎಲ್ಲ ಜನರ ಗಮನವನ್ನು ಬೇರೆಡೆಗೆ ತಿರುಗಿಸಿ ಬಿಡುತ್ತದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಸಂಸತ್ತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಪಸ್ಥಿತಿಯ ಬಗ್ಗೆ ಉಲ್ಲೇಖಿಸಿದ ರಾಹುಲ್ ಗಾಂಧಿ, ಹೊಸ ಸಂಸತ್ತು ಬಹಳ ಸುಂದರ ಕಟ್ಟಡ. ಇದರಲ್ಲಿ ಆಕರ್ಷಕ ನವಿಲಿನ ವಿನ್ಯಾಸಗಳಿವೆ. ಆದರೆ ಇವತ್ತು ಇಲ್ಲಿ ನಮ್ಮ ರಾಷ್ಟ್ರಪತಿಗಳಿರಬೇಕಿತ್ತು. ಅವರೊಬ್ಬ ಆದಿವಾಸಿ ಮಹಿಳೆ. ಅವರು ಇವತ್ತು ಹೊಸ ಸಂಸತ್ತಿನ ಕಲಾಪ ಶುರುವಾಗುವಾಗ ಇದ್ದಿದ್ದರೆ ಬಹಳ ಸೂಕ್ತವಾಗಿರುತ್ತಿತ್ತು ಎಂದು ಗಮನ ಸೆಳೆದರು.