ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ: ಭಾರತ ತೊರೆದ ಪಾಕ್ ಕ್ರಿಕೆಟ್ ನಿರೂಪಕಿ
ಝೈನಾಬ್ ಅಬ್ಬಾಸ್ | Photo :livemint.com
ಹೈದರಾಬಾದ್: ಭಾರತದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ನ ವರದಿ ಮಾಡುವ ಐಸಿಸಿ ಡಿಜಿಟಲ್ ತಂಡದ ಸದಸ್ಯೆಯಾಗಿರುವ ಪಾಕಿಸ್ತಾನಿ ನಿರೂಪಕಿ ಝೈನಾಬ್ ಅಬ್ಬಾಸ್ ಸೋಮವಾರ ಭಾರತವನ್ನು ತೊರೆದಿದ್ದಾರೆ. ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ವಿರೋಧಿ ಸಂದೇಶಗಳನ್ನು ಹಾಕಿರುವುದಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ಅವರ ವಿರುದ್ಧ ಆಕ್ರೋಶ ವ್ಯಕ್ತಿವಾಗುತ್ತಿದ್ದಂತೆ ಅವರು ಭಾರತದಿಂದ ಹೋಗಿದ್ದಾರೆ.
ಆದರೆ, ಅವರು ವೈಯಕ್ತಿಕ ಕಾರಣಗಳಿಗಾಗಿ ಹೋಗಿದ್ದಾರೆ ಎಂದು ಐಸಿಸಿ ಹೇಳಿದೆ. ಹೈದರಾಬಾದ್ನಲ್ಲಿ ನಡೆಯಲಿರುವ ಪಾಕಿಸ್ತಾನದ ಮೂರು ವಿಶ್ವಕಪ್ ಪಂದ್ಯಗಳ ವರದಿ ಮಾಡಲು ಅವರನ್ನು ನಿಯೋಜಿಸಲಾಗಿತ್ತು.
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಪಂದ್ಯಾವಳಿಯಲ್ಲಿ ತಾನು ವರದಿ ಮಾಡುತ್ತಿದ್ದೇನೆ ಎಂಬುದಾಗಿ ಅವರು ಘೋಷಿಸಿದ ಬಳಿಕ, ಅವರು ಹಿಂದೆ ಟ್ವಿಟರ್ನಲ್ಲಿ ಹಾಕಿದ್ದ ಸಂದೇಶಗಳು ವೈರಲ್ ಆಗಿವೆ.
‘‘ಝೈನಾಬ್ರನ್ನು ಗಡಿಪಾರು ಮಾಡಲಾಗಿಲ್ಲ, ಅವರು ವೈಯಕ್ತಿಕ ಕರಣಗಳಿಗಾಗಿ ಭಾರತದಿಂದ ಹೋಗಿದ್ದಾರೆ’’ ಎಂದು ಐಸಿಸಿ ವಕ್ತಾರರೊಬ್ಬರು ಪಿಟಿಐಗೆ ತಿಳಿಸಿದರು.