ಉತ್ತರಪ್ರದೇಶ | ಉಪಚುನಾವಣೆಯ ವೇಳೆ ಮೀರಾಪುರದಲ್ಲಿ ಹಿಂಸಾಚಾರ, ಕಲ್ಲು ತೂರಾಟ ; 100ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲು
Photo | PTI
ಮುಜಾಫರ್ ನಗರ : ಉತ್ತರಪ್ರದೇಶದ ಮೀರಾಪುರ ವಿಧಾನಸಭಾ ಉಪಚುನಾವಣೆ ವೇಳೆ ಕಾಕ್ರೋಲಿ ಗ್ರಾಮದಲ್ಲಿ ನಡೆದ ಹಿಂಸಾಚಾರ ಮತ್ತು ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ ಸಮಾಜವಾದಿ ಪಕ್ಷ ಮತ್ತು ಎಐಎಂಐಎಂ ಪಕ್ಷದ ಕಾರ್ಯಕರ್ತರು ಸೇರಿ 100ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಾಲ್ ಮಾಹಿತಿ ನೀಡಿದ್ದು, ನವೆಂಬರ್ 20ರಂದು ಸಂಜೆ ನಡೆದ ಘರ್ಷಣೆಗೆ ಸಂಬಂಧಿಸಿ 15 ಮಂದಿ ಸಮಾಜವಾದಿ ಪಕ್ಷದ ಬೆಂಬಲಿಗರು, 10 ಮಂದಿ ಎಐಎಂಐಎಂ ಬೆಂಬಲಿಗರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ವಿರುದ್ಧ ಕೊಲೆ ಯತ್ನ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಿಂಸಾಚಾರದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಎಫ್ಐಆರ್ ಪ್ರಕಾರ, ಬುಧವಾರ ಕಾಕ್ರೋಲಿ ಗ್ರಾಮದಲ್ಲಿ ಮತದಾನದ ವೇಳೆ ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಎಐಎಂಐಎಂ ಜಿಲ್ಲಾಧ್ಯಕ್ಷ ಮೌಲಾನಾ ಇಮ್ರಾನ್ ಖಾಸ್ಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲ ಪೊಲೀಸರು ಮತದಾರರು ತಮ್ಮ ಹಕ್ಕನ್ನು ಚಲಾಯಿಸದಂತೆ ತಡೆದಿದ್ದಾರೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.