ʼಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆʼ ರದ್ದುಗೊಳಿಸುವಂತೆ ವಿದ್ಯಾರ್ಥಿಗಳು, ಅಧ್ಯಾಪಕರಿಂದ ಬೆಂಗಳೂರಿನ IIScಗೆ ಪತ್ರ
"ಕಾರ್ಯಕ್ರಮಕ್ಕೆ ಅನುಮತಿ ನೀಡುವುದು ಇಸ್ರೇಲ್ ನಡೆಸಿದ ನರಹತ್ಯೆಗೆ ಬೆಂಬಲ ನೀಡಿದಂತಾಗುತ್ತದೆ"
ಬೆಂಗಳೂರು: “ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆ” ಎಂಬ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc)ಗೆ 1,300ಕ್ಕೂ ಹೆಚ್ಚು ಭಾರತೀಯ ಮತ್ತು ಸಾಗರೋತ್ತರ ವಿವಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪತ್ರವನ್ನು ಬರೆದಿದ್ದಾರೆ.
ಸೆ. 23ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ “ಭಾರತ-ಇಸ್ರೇಲ್ ವ್ಯಾಪಾರ ಶೃಂಗಸಭೆ” ಎಂಬ ಕಾರ್ಯಕ್ರಮವನ್ನು ನಡೆಸಲು ಸಿದ್ಥತೆ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನುಮತಿ ನೀಡುವುದು ಫೆಲೆಸ್ತೀನ್ ನಲ್ಲಿ ಇಸ್ರೇಲ್ ನಡೆಸಿದ ನರಹತ್ಯೆಗೆ ಮತ್ತು ಇಸ್ರೇಲ್ ಇತರ ನೆರೆಯ ದೇಶಗಳ ಜೊತೆ ನಡೆಸುವ ಆಕ್ರಮಣಕ್ಕೆ ನೇರ ಬೆಂಬಲವನ್ನು ನೀಡಿದಂತಾಗುತ್ತದೆ ಎಂದು ಪತ್ರಕ್ಕೆ ಸಹಿ ಮಾಡಿದ ವಿದ್ಯಾರ್ಥಿಗಳು ಹೇಳಿದ್ದಾರೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಭಾಂಗಣದಲ್ಲಿ ಥಿಂಕ್ ಇಂಡಿಯಾ ಸಂಸ್ಥೆ, ಇಂಡಿಯನ್ ಚೇಂಬರ್ ಆಫ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಮತ್ತು ಮೈಸೂರು ಲ್ಯಾನ್ಸರ್ಸ್ ಹೆರಿಟೇಜ್ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಶೃಂಗಸಭೆಯು ಎರಡೂ ದೇಶಗಳ ಉದ್ಯಮಿಗಳು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ. ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಸೈಬರ್ ಭದ್ರತೆ, ಸುಸ್ಥಿರ ಮತ್ತು ಜಲತಂತ್ರಜ್ಞಾನದ ಕುರಿತು ಚರ್ಚೆಗಳು ನಡೆಸಲಿದೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಥಿಂಕ್ ಇಂಡಿಯಾ ಹೇಳಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕ ಗೋವಿಂದನ್ ರಂಗರಾಜನ್‌ಗೆ ಬರೆದ ಪತ್ರದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗಾಝಾದ ಮೇಲೆ ಇಸ್ರೇಲ್‌ನ ಯುದ್ಧದಿಂದ ಉಂಟಾದ ವಿನಾಶದ ಪ್ರಮಾಣವನ್ನು ಉಲ್ಲೇಖಿಸಿದ್ದು, ಸಂಸ್ಥೆಯು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಗಾಝಾದ ವಿಶ್ವವಿದ್ಯಾಲಯಗಳನ್ನು ನಾಶಪಡಿಸಿದೆ, ಇದು ಗಾಝಾದ ಆರೋಗ್ಯ ಸೌಲಭ್ಯಗಳನ್ನು ನಾಶಪಡಿಸಿದೆ. ಪೊಲಿಯೋದಂತಹ ರೋಗಗಳ ಉದ್ಭವಕ್ಕೆ ಕಾರಣವಾಗಿದೆ. 96% ಗಾಝಾದ ಜನರು ಆಹಾರದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವ ಆಹಾರ ಸಂಸ್ಥೆ ಅಂದಾಜಿಸಿದೆ. ಆದರೆ ವೆಸ್ಟ್ ಬ್ಯಾಂಕ್ ಮೇಲೆ ಕ್ರೂರ ದಾಳಿಗಳನ್ನು ಇಸ್ರೇಲ್ ಮುಂದುವರಿಸಿದೆ. ಲೆಬನಾನ್‌ನಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಸ್ಫೋಟಿಸುವ ಮೂಲಕ ಭಯೋತ್ಪಾದಕ ದಾಳಿಯಲ್ಲಿ ತೊಡಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.