ಕನ್ವರ್ ಮಾರ್ಗ ನಿರ್ಮಾಣಕ್ಕೆ 17,600ಕ್ಕೂ ಹೆಚ್ಚು ಮರಗಳ ಕಡಿತ : NGTಗೆ ತಿಳಿಸಿದ ಸಮಿತಿ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ : ಮುಂಬರುವ ಕನ್ವರ್ ಯಾತ್ರೆ ಮಾರ್ಗದ ನಿರ್ಮಾಣಕ್ಕಾಗಿ ಉತ್ತರ ಪ್ರದೇಶದ ಮೂರು ಜಿಲ್ಲೆಗಳಲ್ಲಿ 17,600ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ ಎಂದು ಸತ್ಯಶೋಧನಾ ಸಮಿತಿಯೊಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ತಿಳಿಸಿದೆ.
ಘಾಝಿಯಾಬಾದ್ ನ ಮುರಾದ್ ಬಾದ್ ನಿಂದ ಮುಝಾಫ್ಫರ್ ನಗರದ ಪುರ್ಕಾಜಿ ನಡುವಿನ ಪ್ರಸ್ತಾವಿತ ಮಾರ್ಗ ನಿರ್ಮಾಣಕ್ಕೆ ಘಾಝಿಯಾಬಾದ್, ಮೀರತ್ ಹಾಗೂ ಮುಝಾಫ್ಫರ್ ನಗರದ ಮೂರು ಅರಣ್ಯ ವಲಯಗಳಲ್ಲಿನ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮರಗಳು ಹಾಗೂ ಪೊದೆಗಳನ್ನು ಕಡಿಯುತ್ತಿರುವ ಕುರಿತು ನ್ಯಾಯಾಧಿಕರಣ ವಿಚಾರಣೆ ನಡೆಸುತ್ತಿರುವ ಪ್ರಕರಣ ಇದಾಗಿದೆ.
ನವೆಂಬರ್ 6ರಂದು ಹೊರಡಿಸಿದ್ದ ಆದೇಶದಲ್ಲಿ ಸತ್ಯಶೋಧನೆಗಾಗಿ ರಚಿಸಲಾಗಿದ್ದ ಜಂಟಿ ಸಮಿತಿಯು ತನ್ನ ಮಧ್ಯಂತರ ವರದಿ ಸಲ್ಲಿಸಿದೆ ಎಂಬ ಮಾಹಿತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷ ಪ್ರಕಾಶ್ ಶ್ರೀವಾಸ್ತವರನ್ನೊಳಗೊಂಡ ಪೀಠವು ಪರಿಗಣಿಸಿತು.
ಈ ಸಮಿತಿಯು ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹಿರಿಯ ವಿಜ್ಞಾನಿ, ರಾಜ್ಯ ಮುಖ್ಯ ಕಾರ್ಯದರ್ಶಿ ಅಥವಾ ಅವರ ಪ್ರತಿನಿಧಿ ಹಾಗೂ ಮೀರತ್ ಜಿಲ್ಲಾಧಿಕಾರಿಯನ್ನು ಒಳಗೊಂಡಿದೆ.
“ನೀರಾವರಿ ಇಲಾಖೆ ಒದಗಿಸಿರುವ ಮಾಹಿತಿಯ ಪ್ರಕಾರ, ಆಗಸ್ಟ್ 9, 2024ರವರೆಗೆ ಎಲ್ಲ ಮೂರು ಜಿಲ್ಲೆಗಳಲ್ಲಿ 17,707 ಮರಗಳನ್ನು ಕಡಿಯಲಾಗಿದೆ ಎಂದು ಮಧ್ಯಂತರ ವರದಿಯಲ್ಲಿ ಉಲ್ಲೇಖಿಸಲಾಗಿದೆ” ಎಂದು ನ್ಯಾಯಾಂಗ ಸದಸ್ಯ ನ್ಯಾ. ಅರುಣ್ ಕುಮಾರ್ ತ್ಯಾಗಿ ಹಾಗೂ ತಜ್ಞ ಸದಸ್ಯ ಎ.ಸೆಂಥಿಲ್ ವೇಲ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
1,12,722 ಮರಗಳನ್ನು ಕಡಿಯಲು ಅನುಮತಿ ನೀಡಲಾಗಿದ್ದರೂ, ನಂತರ ಕೇವಲ 33,776 ಮರಗಳನ್ನು ಕಡಿಯಲು ನಿರ್ಧರಿಸಲಾಗಿತ್ತು ಎಂಬ ಮಾಹಿತಿಯನ್ನು ನ್ಯಾಯಮಂಡಳಿ ಗಮನಕ್ಕೆ ತೆಗೆದುಕೊಂಡಿತು.
ಉತ್ತರ ಪ್ರದೇಶ ಮರಗಳ ಸಂರಕ್ಷಣೆ ಕಾಯ್ದೆಯ ಅನುಸಾರವಾಗಿ ಮರಗಳ ಸಂಖ್ಯೆಯನ್ನು ಕಟ್ಟುನಿಟ್ಟಾಗಿ ಲೆಕ್ಕ ಹಾಕಲಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ನ್ಯಾಯಮಂಡಳಿ ಸೂಚಿಸಿದೆ.
ರಸ್ತೆ ನಿರ್ಮಾಣಕ್ಕಾಗಿ ಕಡಿಯಬೇಕಾದ ಮರಗಳ ಸಂಖ್ಯೆ ಕುರಿತು ಇನ್ನೆರಡು ವಾರಗಳಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನ್ಯಾಯಮಂಡಳಿ ನಿರ್ದೇಶನ ನೀಡಿದೆ.
“15-20 ಮೀಟರ್ ಸುತ್ತಳತೆಯ ಮರಗಳನ್ನು ಕಡಿಯಲಾಗಿದೆಯೆ ಎಂಬುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ಹೌದಾದರೆ, ಅದಕ್ಕೆ ಸಂಬಂಧಿತ ವ್ಯಕ್ತಿಯೇ ಜವಾಬ್ದಾರನಾಗಿರುತ್ತಾನೆ” ಎಂದೂ ನ್ಯಾಯಮಂಡಳಿ ಹೇಳಿದೆ.
“ಸಾರ್ವಜನಿಕ ಯೋಜನೆಗೆ ಸಂಬಂಧಿಸಿರುವ ವಿಷಯದ ಗಾಂಭೀರ್ಯತೆಯನ್ನು ಪರಿಗಣಿಸಿ, ಸೂಚನೆಯನ್ವಯ ಜಂಟಿ ಸಮಿತಿಯು ಯಾವುದೇ ವಿಳಂಬವಿಲ್ಲದೆ ತನ್ನ ಅಂತಿಮ ವರದಿಯನ್ನು ತ್ವರಿತವಾಗಿ ಸಲ್ಲಿಸಬೇಕು” ಎಂದೂ ನ್ಯಾಯಮಂಡಳಿ ಸೂಚಿಸಿದೆ.
ನಾಲೆಯ ಎರಡೂ ಬದಿಯಲ್ಲಿ ಕಡಿಯಲಾಗಿರುವ ಮರಗಳ ಪ್ರಮಾಣವನ್ನು ಗುರುತಿಸಲು ಡ್ರೋನ್ ಸಮೀಕ್ಷೆ ನಡೆಸಲಾಗುವುದು ಎಂಬ ಪ್ರಧಾನ ಸರ್ವೇಕ್ಷಣಾಧಿಕಾರಿಯು ಈ ಹಿಂದೆ ಅಕ್ಟೋಬರ್ 16ರಂದು ನೀಡಿದ್ದ ಹೇಳಿಕೆಯನ್ನೂ ನ್ಯಾಯಮಂಡಳಿ ಪರಿಗಣಿಸಿತು.
ಆದರೆ, ಭಾರತೀಯ ಸರ್ವೇಕ್ಷಣಾ ಇಲಾಖೆ ಸಲ್ಲಿಸಿರುವ ವರದಿಯ ಪ್ರಕಾರ, ಆ ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಿಲ್ಲ ಎಂದೂ ನ್ಯಾಯಮಂಡಳಿ ಹೇಳಿತು. “ಹೀಗಾಗಿ ಅಕ್ಟೋಬರ್ 2024ರವರೆಗೆ ಪರಿಗಣಿಸಲಾಗಿರುವ ವ್ಯಾಪ್ತಿಯ ಉಪಗ್ರಹ ಚಿತ್ರಗಳನ್ನು ಪತ್ತೆ ಹಚ್ಚಬೇಕು ಹಾಗೂ ಪರಿಗಣನೆಯಲ್ಲಿರುವ ವ್ಯಾಪ್ತಿಯಲ್ಲಿ 2023ರವರೆಗೆ ಇದ್ದ ಮರಗಳು ಹಾಗೂ ಅಕ್ಟೋಬರ್ 2024ರವರೆಗೆ ಕಡಿಯಲಾಗಿರುವ ಮರಗಳ ಹೋಲಿಕೆಯ ವರದಿಯನ್ನು ಭಾರತೀಯ ಸರ್ವೇಕ್ಷಣಾ ಇಲಾಖೆಯ ಪ್ರಧಾನ ಸರ್ವೇಕ್ಷಣಾಧಿಕಾರಿ ಸಲ್ಲಿಸಬೇಕು” ಎಂದು ನ್ಯಾಯಮಂಡಳಿ ಸೂಚನೆ ನೀಡಿದೆ.
ಪ್ರಕರಣದ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಲಾಗಿದೆ.