ಭಾರತದಲ್ಲಿ 20 ಕೋಟಿಗೂ ಅಧಿಕ ಮಹಿಳೆಯರು ಬಾಲ್ಯದಲ್ಲಿ ವಿವಾಹವಾಗಿದ್ದಾರೆ: ವಿಶ್ವಸಂಸ್ಥೆ ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದಲ್ಲಿ 20 ಕೋಟಿಗೂ ಅಧಿಕ ಮಹಿಳೆಯರು ಬಾಲ್ಯದಲ್ಲಿಯೇ ವಿವಾಹವಾಗಿದ್ದಾರೆ ಎಂದು ಇತ್ತೀಚಿನ ವಿಶ್ವಸಂಸ್ಥೆ ವರದಿಯೊಂದು ಬಹಿರಂಗಗೊಳಿಸಿದೆ. ಜಾಗತಿಕವಾಗಿ 64 ಕೋಟಿ ಮಹಿಳೆಯರು 18 ವರ್ಷ ತುಂಬುವ ಮೊದಲೇ ಮದುವೆಯಾಗಿದ್ದಾರೆ ಎಂದು ಅಂದಾಜಿಸಲಾಗಿದ್ದು,ಈ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳು ಭಾರತವೊಂದರಲ್ಲೇ ವರದಿಯಾಗಿವೆ.
ಸುಸ್ಥಿರ ಅಭಿವೃದ್ಧಿ ಗುರಿಗಳ ವರದಿ 2024ರ ಪ್ರಕಾರ 25 ವರ್ಷಗಳ ಹಿಂದಿನ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಹೋಲಿಸಿದರೆ ಪ್ರತಿ ಐವರು ಮಹಿಳೆಯರಲ್ಲಿ ಒಬ್ಬರು 18 ವರ್ಷ ತುಂಬುವ ಮೊದಲೇ ಮದುವೆಯಾಗುತ್ತಾರೆ. ಈ ಸುಧಾರಣೆಯು ಕಳೆದ ಕಾಲು ಶತಮಾನದಲ್ಲಿ ಸುಮಾರು 6.8 ಕೋಟಿ ಬಾಲ್ಯವಿವಾಹಗಳನ್ನು ತಡೆಗಟ್ಟಿದೆ.
ಈ ಸುಧಾರಣೆಗಳ ಹೊರತಾಗಿಯೂ ವಿಶ್ವದಲ್ಲಿ ಲಿಂಗ ಸಮಾನತೆಯ ಕೊರತೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ. ಮಹಿಳೆಯರ ವಿರುದ್ಧ ಹಿಂಸೆ ಹಾಗೂ ಅವರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಮಹಿಳೆಯರಿಗೆ ಸ್ವಾಯತ್ತತೆಯ ಕೊರತೆಯಂತಹ ಸಮಸ್ಯೆಗಳು ಮುಂದುವರಿದಿವೆ. ಈಗಿನ ವೇಗದಲ್ಲಿ, ನಿರ್ವಹಣಾ ಹುದ್ದೆಗಳಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸಮಾನತೆಯನ್ನು ಸಾಧಿಸಲು 176 ವರ್ಷಗಳು ಬೇಕಾಗುತ್ತವೆ. ಜಾಗತಿಕ ಜೀವನ ಸ್ಥಿತಿಗಳನ್ನು ಹೆಚ್ಚಿಸಲು ವಿಶ್ವಸಂಸ್ಥೆಯು ನಿಗದಿಗೊಳಿಸಿದ್ದ 169 ಗುರಿಗಳ ಪೈಕಿ ಶೇ.17ರಷ್ಟು ಮಾತ್ರ 2030ರ ಗಡುವಿನೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯು ಬೆಟ್ಟು ಮಾಡಿದೆ. 2015ರಲ್ಲಿ ಜಾಗತಿಕ ನಾಯಕರು ಅಳವಡಿಸಿಕೊಂಡಿದ್ದ ಈ ಗುರಿಗಳು ಬಡತನವನ್ನು ಅಂತ್ಯಗೊಳಿಸುವುದರಿಂದ ಹಿಡಿದು ಲಿಂಗ ಸಮಾನತೆಯನ್ನು ಸಾಧಿಸುವವರೆಗೆ ವ್ಯಾಪಕ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶವನ್ನು ಹೊಂದಿವೆ. ಆದರೂ ಈ ಗುರಿಗಳ ಪೈಕಿ ಸುಮಾರು ಅರ್ಧದಷ್ಟು ಕನಿಷ್ಠ ಅಥವಾ ಮಧ್ಯಮ ಪ್ರಗತಿಯನ್ನು ತೋರಿಸುತ್ತಿದ್ದರೆ,ಮೂರನೇ ಒಂದು ಭಾಗಕ್ಕೂ ಹೆಚ್ಚಿನ ಗುರಿಗಳು ಸ್ಥಗಿತಗೊಂಡಿವೆ ಅಥವಾ ಹಿನ್ನಡೆಯನ್ನು ಕಂಡಿವೆ.
‘ಸಂದೇಶವು ಸರಳವಾಗಿದೆ. ಶಾಂತಿಯನ್ನು ಕಾಯ್ದುಕೊಳ್ಳುವಲ್ಲಿ, ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಮತ್ತು ಅಂತರರಾಷ್ಟ್ರೀಯ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ನಮ್ಮ ವೈಫಲ್ಯವು ಅಭಿವೃದ್ಧಿಯನ್ನು ದುರ್ಬಲಗೊಳಿಸುತ್ತಿದೆ’ ಎಂದು ವರದಿಯನ್ನು ಬಿಡುಗಡೆಗೊಳಿಸಿದ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿದ್ದಾರೆ.
ಗುಟೆರಸ್ ವರದಿಯಲ್ಲಿ ಕೆಲವು ‘ಆಶಾಕಿರಣ’ಗಳನ್ನು ಒಪ್ಪಿಕೊಂಡಿದ್ದಾರಾದರೂ,2030ರ ಕಾರ್ಯಸೂಚಿಯನ್ನು ಸಾಧಿಸಲು ತುರ್ತು ಮತ್ತು ಹೆಚ್ಚಿನ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ.