ಉತ್ತರಪ್ರದೇಶದಲ್ಲಿ ನಡೆಯಲಿರುವ "ಧರ್ಮ ಸಂಸದ್" ಗೆ ತಡೆ ನೀಡುವಂತೆ 250 ಸಂಘಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರಿಂದ ರಾಷ್ಟ್ರಪತಿಗೆ ಬಹಿರಂಗ ಪತ್ರ
ಸಾಂದರ್ಭಿಕ ಚಿತ್ರ (credit: bhaskar.com)
ಹೊಸದಿಲ್ಲಿ: ಉತ್ತರಪ್ರದೇಶದಲ್ಲಿ ಡಿಸೆಂಬರ್ 19ರಂದು ನಿಗದಿಯಾಗಿರುವ "ಧರ್ಮ ಸಂಸದ್" ಗೆ ತಡೆನೀಡುವಂತೆ ರಾಷ್ಟ್ರಪತಿಗಳಿಗೆ 22 ರಾಜ್ಯಗಳ 250 ಸಂಘಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಬಹಿರಂಗ ಪತ್ರವನ್ನು ಬರೆದಿದ್ದಾರೆ.
ರಾಷ್ಟ್ರಪತಿಗೆ ಬರೆದ ಬಹಿರಂಗ ಪತ್ರದಲ್ಲಿ, ಈ ಧರ್ಮ ಸಂಸದ್ ಆಯೋಜಿಸುವ ಗುಂಪಿನ ಸದಸ್ಯರ ಮೇಲೆ ಈಗಾಗಲೇ ಅನೇಕ ಅಪರಾಧಗಳ ಆರೋಪಗಳಿವೆ. ಇವರ ಚಟುವಟಿಕೆ ಹಿಂಸಾಚಾರಕ್ಕೆ ಕಾರಣವಾಗಿವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಖಂಡನೆಗೆ ಗುರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಯತಿ ನರಸಿಂಹಾನಂದ, ರಾಕೇಶ್ ತೋಮರ್, ದರ್ಶನ್ ಭಾರತಿ ಮತ್ತು ಇತರರನ್ನು ಉಲ್ಲೇಖಿಸಿ, ಉತ್ತರಾಖಂಡ ಮತ್ತು ಉತ್ತರಪ್ರದೇಶ ಸರ್ಕಾರಗಳು ಇವರನ್ನು ಬೆಂಬಲಿಸುತ್ತಿದೆ. ಈ ವ್ಯಕ್ತಿಗಳು ಅನೇಕ ದ್ವೇಷದ ಭಾಷಣಗಳಲ್ಲಿ ತೊಡಗಿಸಿಕೊಂಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಅಪರಾಧ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ, ಪೂರ್ವ ಅಪರಾಧಗಳಿಗಾಗಿ ಅವರಿಗೆ ವಿಧಿಸಲಾದ ಜಾಮೀನು ಷರತ್ತುಗಳನ್ನು ನೇರವಾಗಿ ಉಲ್ಲಂಘಿಸುತ್ತಿದ್ದರೂ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ವಿವಿಧ ಹಂತಗಳಲ್ಲಿ ಈ ವ್ಯಕ್ತಿಗಳು ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕ ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದಾರೆ ಮತ್ತು ಅವರು ವೆಬ್ಸೈಟ್ ಅನ್ನು ಕೂಡ ಸ್ಥಾಪಿಸಿದ್ದಾರೆ, ಅನೇಕ ದ್ವೇಷದ ಭಾಷಣಗಳನ್ನು ಮಾಡಿದ್ದಾರೆ ಮತ್ತು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ, ಹಿಂದೂಗಳು ತಮ್ಮನ್ನು ತಾವು ಶಸ್ತ್ರಾಸ್ತ್ರ ಇಟ್ಟುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಮುಸ್ಲಿಮರನ್ನು ಮನುಷ್ಯರಲ್ಲ ಮತ್ತು ಮಾನವೀಯತೆಯ ಶತ್ರುಗಳು ಎಂದು ಹೇಳುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಹರಿದ್ವಾರದಲ್ಲಿ ಡಿಸೆಂಬರ್ 2021ರಲ್ಲಿ ಆಯೋಜಿಸಿದ್ದ ಧರ್ಮ ಸಂಸದ್ ನಲ್ಲಿ ಹಿಂಸಾಚಾರ ಮತ್ತು ನರಮೇಧಕ್ಕೆ ಕರೆಗಳನ್ನು ನೀಡಲಾಗಿತ್ತು. ಮಾಜಿ ಸೇನಾ ಸಿಬ್ಬಂದಿಗಳು, ಅನೇಕ ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ವಿರೋಧ ಪಕ್ಷಗಳು ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಇದಕ್ಕೆ ಖಂಡನೆಯನ್ನು ವ್ಯಕ್ತಪಡಿಸಿದೆ.
ಕಾರ್ಯಕ್ರಮಕ್ಕೆ ತಡೆ ವಿಧಿಸುವಂತೆ 101 ನಿವೃತ್ತ ಸರ್ಕಾರಿ ಅಧಿಕಾರಿಗಳು ಅಕ್ಟೋಬರ್ ನಲ್ಲಿ ಮಾಡಿದ ಪೂರ್ವ ಮನವಿಯನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ, ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆ ನಡೆಯದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು, ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕು ಮತ್ತು ದ್ವೇಷದ ಅಪರಾಧಗಳ ಕುರಿತು ಸುಪ್ರೀಂ ಕೋರ್ಟ್ ಆದೇಶಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ದ್ವೇಷದ ಭಾಷಣಗಳಿಗೆ ಸಂಬಂಧಿಸಿದ ಹಿಂಸಾಚಾರಕ್ಕೆ ಬಲಿಯಾದವರಿಗೆ ಪರಿಹಾರವನ್ನು ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ. ಪತ್ರಕ್ಕೆ AFTER, ACTU, SF ಮತ್ತು APCR ನಂತಹ ಪ್ರಮುಖ ಸಂಸ್ಥೆಗಳು ಮತ್ತು 190ಕ್ಕೂ ಅಧಿಕ ಕಾರ್ಯಕರ್ತರು ಸಹಿ ಹಾಕಿದ್ದಾರೆ.