ಗಾಝಾ ಆಸ್ಪತ್ರೆ ದಾಳಿ : ಜಮ್ಮುಕಾಶ್ಮೀರದ 30ಕ್ಕೂ ಅಧಿಕ ಸಂಘಟನೆಗಳ ಖಂಡನೆ
ಶ್ರೀನಗರ : ಪೆಲೆಸ್ತೀನಿನ ಗಾಝಾದ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯನ್ನು ಮಿರ್ವೈಝ್ ಉಮರ್ ಫಾರೂಕ್ ನೇತೃತ್ವದ ಮುತ್ತಹಿದಾ ಮಜ್ಲಿಸೆ ಉಲೇಮಾ (ಎಂಎಂಯು) ನೇತೃತ್ವದಲ್ಲಿ ಜಮ್ಮುಕಾಶ್ಮೀರದ 30ಕ್ಕೂ ಅಧಿಕ ಮುಸ್ಲಿಂ ಸಂಘಟನೆಗಳು ಖಂಡಿಸಿವೆ. ನ್ಯಾಶನಲ್ ಕಾನ್ಫರೆನ್ಸ್ (ಎನ್ಸಿ) ಹಾಗೂ ಪಿಡಿಪಿ ಪಕ್ಷಗಳು ಕೂಡಾ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿವೆ.
ಮಕ್ಕಳು ಸೇರಿದಂತೆ 500ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಗಾಝಾ ಆಸ್ಪತ್ರೆಯ ಮೇಲಿನ ಬಾಂಬ್ ದಾಳಿಗೆ ಧಾರ್ಮಿಕ ಸಂಘಟನೆಗಳು ಆಘಾತ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸಿರುವುದಾಗಿ ಎಂಎಂಯು ಸಂಘಟನೆಯ ವಕ್ತಾರರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಈ ಭೀಕರ ದುರಂತದಿಂದಾಗಿ ಜಮ್ಮುಕಾಶ್ಮೀರದ ಜನತೆ ತೀವ್ರವಾಗಿ ಶೋಕ ತಪ್ತರಾಗಿದ್ದಾರೆ ಹಾಗೂ ಫೆಲೆಸ್ತೀನಿನ ಜನತೆಯ ಪರವಾಗಿ ಒಗ್ಗೂಡಿ ನಿಲ್ಲಲಿದ್ದಾರೆ. ಆಸ್ಪತ್ರೆಯಲ್ಲಿ ಫೆಲೆಸ್ತೀನಿಯರ ಮೇಲೆ ನಡೆದ ನರಮೇಧವು ವಿಶ್ವಸಂಸ್ಥೆಯ ಸನದು ಹಾಗೂ ಜಿನೇವಾ ಒಡಂಬಡಿಕೆಗಳ ಅಡಿ ಅತ್ಯಂತ ಘೋರವಾದ ಯುದ್ಧ ಅಪರಾಧವಾಗಿದೆ ಎಂದು ಎಂಎಂಯು ವಕ್ತಾರರು ತಿಳಿಸಿದ್ದಾರೆ.
ವಿಶ್ವಸಂಸ್ಥೆ ಹಾಗೂ ಜಾಗತಿಕ ಶಕ್ತಿಗಳು ಪರಸ್ಪರ ಕೆಸರೆರಚಿಕೊಳ್ಳುವುದರಿಂದ ಹಾಗೂ ಪಕ್ಷಪಾತತನದಿಂದ ದೂರ ಸರಿಯಬೇಕು. ಮಾನವೀಯ ಬಿಕ್ಕಟ್ಟು ಎದುರಾಗಿರುವ ಗಾಝಾದಲ್ಲಿ ನಿಜಕ್ಕೂ ಏನಾಗುತ್ತಿದೆಯೆಂಬುದನ್ನು ನೋಡಬೇಕಾದ ಅಗತ್ಯವಿದೆ. ಅಸಹಾಯಕ ಫೆಲೆಸ್ತೀನ್ ನಾಗರಿಕರ ಮೇಲೆ ನಡೆಸಲಾಗುತ್ತಿರುವ ಸಮರವು ನಿಲ್ಲಬೇಕಾಗಿದೆ ಹಾಗೂ ಈ ದೀರ್ಘಾವಧಿಯ ಸಂಘರ್ಷಕ್ಕೆ ತಕ್ಷಣವೇ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಫೆಲೆಸ್ತೀನ್ ಜನತೆಗೆ ಅವರ ಬದುಕು ಹಾಗೂ ನೆಲದ ಮೇಲೆ ಇರುವ ಹಕ್ಕುಗಳನ್ನು ಮರುಸ್ಥಾಪಿಸಬೇಕಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಮಧ್ಯೆ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಕೂಡಾ ಗಾಝಾ ಆಸ್ಪತ್ರೆ ಮೇಲಿನ ಬಾಂಬ್ ದಾಳಿಯನ್ನು ಖಂಡಿಸಿದ್ದಾರೆ. ‘‘ ಹೊಲೊಕಾಸ್ಟ್ ಸಂದರ್ಭದಲ್ಲಿ ಏನೆಲ್ಲಾ ನಡೆದಿರಬಹುದು ಎಂಬುದರ ದುರಂತಮಯ ಮರುನೆನಪಿಸುಕೆ ಇದಾಗಿದೆ. ಬಹುಶಃ ಇಲ್ಲಿರುವ ವ್ಯತ್ಯಾಸವೆಂದರೆ, ಹೊಲೊಕಾಸ್ಟ್ ಸಂದರ್ಭದಲ್ಲಿ ಯಾವ ಜನಾಂಗ ಸಂತ್ರಸ್ತರಾಗಿದ್ದರೋ ಅವರೀಗ ದಮನಕಾರಿಗಳಾಗಿದ್ದಾರೆ. ಗ್ಯಾಸ್ಚೇಂಬರ್ಗಳ ಜಾಗದಲ್ಲಿ ಬಾಂಬ್ ಗಳು ಬಂದಿವೆ. ಜಗತ್ತಿನಲ್ಲಿ ನಡೆಯುತ್ತಿರುವ ಶೇ.50ರಷ್ಟು ತೀವ್ರವಾದವು, ಬಗೆಹರಿಯದ ಫೆಲೆಸ್ತೀನ್ ಬಿಕ್ಕಟ್ಟಿಗೆ ನೀಡಿದ ಪ್ರತಿಕ್ರಿಯೆಯಾಗಿರುತ್ತದೆ. ಇನ್ನು ಮುಂದಾದರೂ ಅಧಿಕಾರದಲ್ಲಿರುವವರು ಸುಮ್ಮನೆ ಮೂಕಪ್ರೇಕ್ಷಕರಾಗಿ ನಿಲ್ಲುತ್ತಾರೆಯೇ ಅಥವಾ ಇನ್ನಾದರೂ ಅಮಾಯಕರ ಹತ್ಯೆ ನಡೆಯಬಾರದೆಂಬ ವಾಸ್ತವತೆಯೊಂದಿಗೆ ಎಚ್ಚೆತ್ತುಕೊಳ್ಳುತ್ತವೆಯೇ ? ಎಂದವರು x ನಲ್ಲಿ ಪೋಸ್ಟ್ ಮಾಡಿದ್ದಾರೆ.