ಉತ್ತರ ಪ್ರದೇಶ | ಸಿಲಿಂಡರ್ ಗಳು ತುಂಬಿದ್ದ ಟ್ರಕ್ ನಲ್ಲಿ ಸ್ಫೋಟ: ನಾಲ್ಕು ಅಂಗಡಿಗಳು ಭಸ್ಮ

ಸಾಂದರ್ಭಿಕ ಚಿತ್ರ (PTI)
ಘಾಝಿಯಾಬಾದ್: ಗಾಝಿಯಾಬಾದ್ ಗೆ ತೆರಳುತ್ತಿದ್ದ 60ಕ್ಕೂ ಹೆಚ್ಚು ಅಡುಗೆ ಅನಿಲ ಸಿಲಿಂಡರ್ ಗಳು ತುಂಬಿದ್ದ ಟ್ರಕ್ ನಲ್ಲಿ ಸ್ಫೋಟ ಸಂಭವಿಸಿ, ಬೆಂಕಿ ಹೊತ್ತಿಕೊಂಡಿರುವ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಶನಿವಾರ ಮುಂಜಾನೆ 4 ಗಂಟೆ ವೇಳೆಗೆ ಈ ಸ್ಫೋಟ ಸಂಭವಿಸಿದ್ದು, ಸಿಲಿಂಡರ್ ಗಳ ನಡುವಿನ ಘರ್ಷಣೆಯಿಂದ ಈ ಸ್ಫೋಟ ಸಂಭವಿಸಿರಬಹುದು ಎಂದು ಊಹಿಸಲಾಗಿದೆ.
ಈ ಸ್ಫೋಟ ಸಂಭವಿಸಿದ ಪ್ರದೇಶದಲ್ಲಿದ್ದ ಕನಿಷ್ಠ ಪಕ್ಷ ನಾಲ್ಕು ಪೀಠೋಪಕರಣ ಅಂಗಡಿಗಳು ಬೆಂಕಿಗೆ ಭಸ್ಮವಾಗಿದ್ದು, ಸಮೀಪದಲ್ಲಿ ನಿಲ್ಲಿಸಿದ್ದ ವಾಹನಗಳೂ ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದಿಂದ ಹರಡಿಕೊಂಡಿದ್ದ ಜ್ವಾಲೆಯನ್ನು ನಂದಿಸಲು ಎಂಟು ಅಗ್ನಿಶಾಮಕ ವಾಹನಗಳು ಸುಮಾರು 90 ನಿಮಿಷಕ್ಕೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದವು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಮುಖ್ಯ ಅಗ್ನಿಶಾಮಕ ದಳ ಅಧಿಕಾರಿ ರಾಹುಲ್ ಪಾಲ್ ತಿಳಿಸಿದ್ದಾರೆ.
ಸ್ಫೋಟದ ಸದ್ದು ಹಾಗೂ ನಂತರದ ಅಪಾಯದಿಂದ ಸುತ್ತಮುತ್ತಲಿನ ಜನರು ರಕ್ಷಣೆಗಾಗಿ ಓಡತೊಡಗಿದರು ಎಂದು ವರದಿಯಾಗಿದೆ.
ಅಧಿಕಾರಿಗಳ ಪ್ರಕಾರ, ಟ್ರಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕನು ಟ್ರಕ್ ಅನ್ನು ಪೆಟ್ರೋಲ್ ಪಂಪ್ ಒಂದರ ಬಳಿ ನಿಲ್ಲಿಸಿದ್ದಾನೆ. ಟ್ರಕ್ ನಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆಯೆ ಪೆಟ್ರೋಲ್ ಪಂಪ್ ನ ಸಿಬ್ಬಂದಿಗಳು ಅಲ್ಲಿಂದ ತೆರಳಿದ್ದಾರೆ.
ಕೆಲವು ಸಿಲಿಂಡರ್ ಗಳು ಪೆಟ್ರೋಲ್ ಪಂಪ್ ಆವರಣಕ್ಕೆ ಬಿದ್ದವಾದರೂ, ಅವು ಸ್ಫೋಟಗೊಳ್ಳಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.