ದಿಲ್ಲಿಯಲ್ಲಿ ಮತದಾರರ ಹೆಸರು ತೆಗೆಯಲು 80 ಸಾವಿರಕ್ಕೂ ಅಧಿಕ ಅರ್ಜಿ: ಚುನಾವಣಾ ಆಯೋಗ
ಚುನಾವಣಾ ಆಯೋಗ | PC : PTI
ಹೊಸದಿಲ್ಲಿ : ನವೆಂಬರ್ 29ರಿಂದ ಇಲ್ಲಿವರೆಗೆ ಮತದಾರರ ಹೆಸರು ತೆಗೆದು ಹಾಕಲು 82,450 ಅರ್ಜಿಗಳು ಹಾಗೂ ಮತದಾರರ ನೋಂದಣಿಗೆ 4.8 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಇಲ್ಲಿನ ಮುಖ್ಯ ಚುನಾವಣಾ ಅಧಿಕಾರಿ ಸೋಮವಾರ ತಿಳಿಸಿದ್ದಾರೆ
ಮುಂಬರುವ ವಿಧಾನ ಸಭೆ ಚುನಾವಣೆಗೆ ಮುನ್ನ ದಿಲ್ಲಿಯ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆಯಲಾಗಿದೆ ಎಂಬ ಆರೋಪದ ಕುರಿತಂತೆ ಆಡಳಿತೂರೂಢ ಆಪ್ ಹಾಗೂ ಪ್ರತಿಪಕ್ಷವಾದ ಬಿಜೆಪಿಯ ನಡುವೆ ವಾಗ್ಸಮರ ನಡೆಯುತ್ತಿರುವ ನಡುವೆ ಮುಖ್ಯ ಚುನಾವಣಾ ಅಧಿಕಾರಿ ಈ ಮಾಹಿತಿ ನೀಡಿದ್ದಾರೆ.
ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಮತದಾರರ ಪಟ್ಟಿಗೆ ಸೇರ್ಪಡೆ, ತೆಗೆಯುವುದು ಅಥವಾ ಮಾರ್ಪಾಡುಗಳನ್ನು ಮಾಡಿದ ಬಳಿಕ 2025 ಜನವರಿ 6ರಂದು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ನಗರದ ಓಖ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರ ನೋಂದಣಿಗಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿದ ಆರೋಪದಲ್ಲಿ 8 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅದು ತಿಳಿಸಿದೆ.
ಮತದಾರರ ಗುರುತು ಚೀಟಿ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸುವುದು ಶಿಕ್ಷಾರ್ಹ ಅಪರಾದ. ಅಂತಹ ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆ ಮಾಹಿತಿ ನೀಡಿದೆ.