848 ರೈಲ್ವೆ ಯೋಜನೆಗಳು ಸರಾಸರಿ 36 ತಿಂಗಳಿಗೂ ಅಧಿಕ ವಿಳಂಬ: ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ತಲಾ 150 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದ 848 ರೈಲ್ವೆ ಯೋಜನೆಗಳು ಸರಾಸರಿ 36 ತಿಂಗಳಿಗೂ ಅಧಿಕ ವಿಳಂಬಗೊಂಡಿವೆ ಎಂದು ವರದಿಯು ತಿಳಿಸಿದೆ.
ಪರಿಶೀಲನೆಯಲ್ಲಿರುವ 1,820 ಯೋಜನೆಗಳ ಪೈಕಿ 56 ಯೋಜನೆಗಳ ಕಾಮಗಾರಿಗಳು ನಿಗದಿತ ವೇಳಾಪಟ್ಟಿಗಿಂತ ಮುಂದಿವೆ,618 ಯೋಜನೆಗಳು ವೇಳಾಪಟ್ಟಿಗೆ ಅನುಗುಣವಾಗಿವೆ. 431 ಯೋಜನೆಗಳು ವೆಚ್ಚವನ್ನು ಮೀರಿವೆ ಮತ್ತು 268 ಯೋಜನೆಗಳು ವೇಳಾಪಟ್ಟಿ ಮತ್ತು ವೆಚ್ಚ ಎರಡನ್ನೂ ಮೀರಿವೆ ಎಂದು ವರದಿಯು ಬೆಟ್ಟು ಮಾಡಿದೆ.
848 ಯೋಜನೆಗಳು ಸರಾಸರಿ 36.59 ತಿಂಗಳು ವಿಳಂಬಗೊಂಡಿವೆ, ಪರಿಣಾಮವಾಗಿ ಅವು ಸಂಪೂರ್ಣಗೊಳ್ಳಲು ನಿರೀಕ್ಷಿತ ವೆಚ್ಚವು ಮೂಲವೆಚ್ಚಕ್ಕಿಂತ ಶೇ.18.5ರಷ್ಟು ಏರಿಕೆಯಾಗಿದೆ.
ವರದಿಯು ಲಲಿತಪುರ-ಸತ್ನಾ-ರೇವಾ-ಸಿಂಗ್ರೌಲಿ ರೈಲು ಮಾರ್ಗ ಯೋಜನೆಯ ನಿದರ್ಶನ ನೀಡಿದೆ. ಇದು 16 ವರ್ಷಗಳಿಗೂ ಅಧಿಕ ವಿಳಂಬಗೊಳ್ಳಲಿದೆ. ಉಗ್ರವಾದ ಪೀಡಿತ ಪ್ರದೇಶದಲ್ಲಿರುವ ಉಧಮಪುರ-ಶ್ರೀನಗರ-ಬಾರಾಮುಲ್ಲಾ ಯೋಜನೆಯು 21ವರ್ಷ ಮತ್ತು 3 ತಿಂಗಳು ವಿಳಂಬಗೊಂಡಿದೆ.
ದೇಶದಲ್ಲಿ ರೈಲ್ವೆ ಯೋಜನೆಗಳಲ್ಲಿ ವಿಳಂಬ ಮುಂದುವರಿದಿದೆ. 2022ರಲ್ಲಿ 56ರಷ್ಟಿದ್ದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಸಂಬಂಧಿತ ವಿಳಂಬಿತ ಯೋಜನೆಗಳ ಸಂಖ್ಯೆ 2023ರಲ್ಲಿ 98ಕ್ಕೆ ಏರಿಕೆಯಾಗಿತ್ತು.
24 ಮೂಲಸೌಕರ್ಯ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಯೋಜನೆಗಳು ವಿಳಂಬಗೊಂಡಿರುವಲ್ಲಿ ರೈಲ್ವೆ ಎರಡನೇ ಸ್ಥಾನದಲ್ಲಿದ್ದರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕ್ಷೇತ್ರವು ಮೊದಲ ಸ್ಥಾನದಲ್ಲಿದೆ ಎಂದು ವರದಿಯು ಹೇಳಿದೆ.
2022,ಡಿಸೆಂಬರ್ಗೆ ಇದ್ದಂತೆ 800ಕ್ಕೂ ಅಧಿಕ ಸರಕಾರಿ ಯೋಜನೆಗಳು ವಿಳಂಬಗೊಂಡಿದ್ದು,ಇದರಿಂದಾಗಿ ವೆಚ್ಚವು 4.5 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಸರಕಾರವು ಕಳೆದ ವರ್ಷ ರಾಜ್ಯಸಭೆಯಲ್ಲಿ ತಿಳಿಸಿತ್ತು.