ಒಡಿಶಾ ಅರಣ್ಯಗಳಲ್ಲಿ ಆನೆಗಳ ಹೆಚ್ಚಳದಿಂದ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳ!
ಸಾಂದರ್ಭಿಕ ಚಿತ್ರ | PC: PTI
ಭುವನೇಶ್ವರ : ಒಡಿಶಾದ ಅರಣ್ಯಗಳಲ್ಲಿ ಆನೆಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷದ ಭೀತಿ ಹೆಚ್ಚಳಕ್ಕೆ ಮತ್ತು ಆನೆಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಡೆಸಿದ ಸಂಶೋಧನೆಯು ಒಡಿಶಾದ ಕಾಡುಗಳು 1,700 ಆನೆಗಳ ವಾಸಕ್ಕೆ ಯೋಗ್ಯವಾಗಿದೆ. ಆದರೆ ಈಗ ಒಡಿಶಾದ ಕಾಡುಗಳಲ್ಲಿ ಸುಮಾರು 2,100ರಷ್ಟು ಆನೆಗಳಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಸಂತ ನಂದಾ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಂದಾ, ಕಾಡುಗಳಲ್ಲಿ ಸುಮಾರು 400ರಷ್ಟು ಆನೆಗಳು ಆಹಾರ, ನೀರಿನ ಕೊರತೆಯಿಂದ ಜನವಸತಿ ಪ್ರದೇಶಕ್ಕೆ ತೆರಳುತ್ತಿದ್ದು, ಇದರಿಂದಾಗಿ ಒಡಿಶಾದಲ್ಲಿ ಪ್ರಾಣಿಗಳು ಮತ್ತು ಮನುಷ್ಯನ ನಡುವೆ ಸಂಘರ್ಷ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.
ಆಹಾರ ಮತ್ತು ನೀರಿನ ಕೊರತೆಯಿಂದ ಆನೆ ಮರಿಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಒಡಿಶಾದ ಒಟ್ಟು ಆನೆಗಳ ಸಾವಿನ ಪೈಕಿ ಸುಮಾರು 60% ಆನೆ ಮರಿಗಳು ಹಲವು ರೋಗಗಳಿಂದ ಸಾವನ್ನಪ್ಪಿದೆ. ಈ ವರ್ಷ ಬೇಟೆ ಅಥವಾ ವಿಷಪ್ರಾಶನದಿಂದ ಯಾವುದೇ ಆನೆ ಸಾವು ಸಂಭವಿಸಿಲ್ಲ. ವನ್ಯಜೀವಿ ರಕ್ಷಣಾಧಿಕಾರಿಗಳು ಹಲವಾರು ಆನೆಗಳನ್ನು ಸಿಮಿಲಿಪಾಲ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಯೋಜಿಸಿದ್ದಾರೆ ಎಂದು ನಂದಾ ಹೇಳಿದ್ದಾರೆ.
ಒಡಿಶಾದ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ವ್ಯಾಪಿಸಿರುವ ಅರಣ್ಯ ಪ್ರದೇಶಗಳಲ್ಲಿ ಆನೆಗಳು ಹೆಚ್ಚಾಗಿದೆ. ದಕ್ಷಿಣ ಒಡಿಶಾದ ಕಾಡುಗಳು ಆನೆಗಳ ವಾಸಕ್ಕೆ ಸೂಕ್ತವಲ್ಲ. ಆದ್ದರಿಂದ ಅವು ಅಲ್ಲಿಗೆ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿನ ಆನೆ ಗಣತಿಯ ಪ್ರಕಾರ, ಒಡಿಶಾದ 28 ಜಿಲ್ಲೆಗಳ 48 ಅರಣ್ಯ ವಿಭಾಗಗಳಲ್ಲಿ ಆನೆಗಳು ಕಂಡುಬಂದಿದೆ. ಆದರೆ 13 ವಿಭಾಗಗಳಲ್ಲಿ ಆನೆಗಳು ಕಂಡು ಬಂದಿಲ್ಲ. ಅಧಿಕೃತ ದಾಖಲೆಗಳ ಪ್ರಕಾರ, 2017-18 ಮತ್ತು 2024-25ರ ನವೆಂಬರ್ 4ರವರೆಗೆ ಒಡಿಶಾದಲ್ಲಿ ವಿವಿಧ ಕಾರಣಗಳಿಂದಾಗಿ 634 ಆನೆಗಳು ಸಾವನ್ನಪ್ಪಿವೆ. ಇವುಗಳಲ್ಲಿ ಕಳ್ಳಬೇಟೆಯಿಂದ 22, ವಿಷಪ್ರಾಶನದಿಂದ ಒಂದು, ಆಕಸ್ಮಿಕ ವಿದ್ಯುತ್ ಆಘಾತದಿಂದ 32, ರೈಲ್ವೆ ಅವಘಢದಿಂದ 28, ವಾಹನ ಢಿಕ್ಕಿ ಹೊಡೆದು 5 ಮತ್ತು ಇತರ ಅಪಘಾತಗಳಿಂದ 103, ಅನಾರೋಗ್ಯದಿಂದ 219 ಆನೆಗಳ ಸಾವು ಸಂಭವಿಸಿದೆ, 117 ಆನೆಗಳ ಸಹಜ ಸಾವು ಸಂಭವಿಸಿದೆ ಎಂದು ದತ್ತಾಂಶವು ತೋರಿಸಿದೆ.